ಬೆಳಗಾವಿ, ಜನವರಿ 01: ಗಡಿನಾಡು ಬೆಳಗಾವಿಯಲ್ಲಿ (Belagavi)ಕನ್ನಡ(Kannada) ಭಾಷೆ ಉಳಿವಿಗಾಗಿ ಅನೇಕ ಹೋರಾಟಗಳು ನಡೆದಿವೆ. ಹೋರಾಟಗಳು ನಡೆದ ಮೇಲೂ ಕೂಡ ಜಿಲ್ಲೆಯ ಕನ್ನಡ ಶಾಲೆಯ ಮಕ್ಕಳಿಗೆ ಮಲತಾಯಿ ಧೋರಣೆ ಮಾತ್ರ ನಿಂತಿಲ್ಲ. ಹೌದು ಬೆಳಗಾವಿ ತಾಲೂಕಿನ ನಂದಿಹಳ್ಳಿಯ ಗ್ರಾಮದ ಒಂದೇ ಆವರಣದಲ್ಲಿ ಕನ್ನಡ ಮತ್ತು ಮರಾಠಿ (Marathi) ಮಾಧ್ಯಮ ಶಾಲೆಗಳಿವೆ. ಈ ಎರಡು ಶಾಲೆಗಳು ಸರ್ಕಾರಿ ಶಾಲೆಯಾಗಿವೆ. ಇಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಮೂಲಭೂತ ಸೌಕರ್ಯ ನೀಡುತ್ತಿಲ್ಲ. ಅಲ್ಲದೇ ಮಕ್ಕಳಿಗೆ ಶಾಲಾ ಆವರಣದಲ್ಲೇ ಕೂರಿಸಿ ಪಾಠ ಮಾಡಲಾಗುತ್ತಿದೆ.
ಅಲ್ಲದೇ ಕನ್ನಡ ಶಾಲೆಯಲ್ಲಿ, ಮರಾಠಿ ಭಾಷೆಯಲ್ಲಿ ಮ್ಯಾಪ್ಗಳನ್ನು ಬಿಡಿಸಲಾಗಿದೆ. ನಾಮಫಲಕಗಳನ್ನೂ ಕೂಡ ಮರಾಠಿ ಭಾಷೆಯಲ್ಲಿ ಹಾಕಲಾಗಿದೆ. ಕನ್ನಡ ಮಾಧ್ಯಮ ಮಕ್ಕಳಿಗೆ ಕುಡಿಯಲು ನೀರಿಲ್ಲ, ಸೂಕ್ತ ಮೈದಾನವಿಲ್ಲ. ಒಂದೇ ಕೊಠಡಿಯಲ್ಲಿ ಐದು ತರಗತಿಯನ್ನು ನಡೆಸಲಾಗುತ್ತಿದೆ. ಮತ್ತೊಂದು ವರ್ಗದ ಮಕ್ಕಳಿಗೆ ಕಟ್ಟೆ ಮೇಲೆ ಕೂರಿಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಆದರೆ ಮರಾಠಿ ಮಾಧ್ಯಮದ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ನೀಡಿ, ಕೊಠಡಿಯೊಳಗೆ ಕೂರಿಸಿ ಪಾಠ ಮಾಡಲಾಗುತ್ತಿದೆ.
ಈ ಮೂಲಕ ಶಾಲೆಯ ಆಡಳಿತ ಮಂಡಳಿ ಕನ್ನಡ, ಮರಾಠಿ ಭಾಷೆ ವಿಚಾರದಲ್ಲಿ ಮಕ್ಕಳ ನಡುವೆ ತಾರತಮ್ಯ ಉಂಟುಮಾಡುತ್ತಿದೆ.ಇದನ್ನು ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಾಲೆಗೆ ದೌಡಾಯಿಸಿ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಕನ್ನಡ ಶಾಲಾ ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕರವೇ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದರು. ಇನ್ನು ಕರವೇ ಕಾರ್ಯಕರ್ತರು ಆಗಮಿಸುವ ವಿಚಾರ ತಿಳಿದು ಶಿಕ್ಷಕರು ಕನ್ನಡ ಮಾಧ್ಯಮ ಮಕ್ಕಳನ್ನು ಕೊಠಿಯೊಳಗೆ ಕೂರಿಸಿದರು. ವಿಷಯ ತಿಳಿದು ಬೆಳಗಾವಿ ಗ್ರಾಮೀಣ ಪೊಲೀಸರು ಶಾಲೆಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.