ದೆಹಲಿ/ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಬೆಂಗಳೂರು ಸಂಬಂಧಿತ ಮೂರು ಪ್ರಮುಖ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಆಸ್ಥೆ ವಹಿಸಿದ್ದು, ಈ ಸಂಬಂಧ ಕೆಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರ ಅನುಷ್ಠಾನದಲ್ಲಿ ಹಣಕಾಸು, ಸಂಪನ್ಮೂಲ ಕ್ರೋಢೀಕರಣ, ಸಮನ್ವಯತೆ ಸೇರಿ ಹಲವು ತೊಡಕುಗಳಿವೆ. ಹೀಗಾಗಿ ಕೇಂದ್ರದ ನೆರವು ಅತ್ಯಗತ್ಯ ಎಂದು ಪತ್ರದಲ್ಲಿ ಕೋರಿದ್ದಾರೆ.
ನಗರ ಸುರಂಗ ಮಾರ್ಗ: ವಿಶೇಷವಾಗಿ ಉದ್ದೇಶಿತ ಬೆಂಗಳೂರು ಸುರಂಗ ಮಾರ್ಗಕ್ಕೆ ಅನುದಾನ ನೀಡುವಂತೆ ಡಿಕೆಶಿ ಕೋರಿದ್ದಾರೆ. ಬೆಂಗಳೂರಿನ ವಾಹನ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ 60 ಕಿ.ಮೀ ಸುರಂಗ ಮಾರ್ಗ ಮಾಡಲು ಯೋಜಿಸಲಾಗಿದೆ. ಪ್ರಮುಖ ಹೊರ ವರ್ತುಲ ರಸ್ತೆ ಸಂಪರ್ಕಿಸುವ ಹಾಗೂ ಮೇಲ್ಮೈ ರಸ್ತೆ ಮಾರ್ಗಕ್ಕೆ ಪರ್ಯಾಯವಾಗಿ ಟನೆಲ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒಟ್ಟು 30,000 ಕೋಟಿ ರೂ ವೆಚ್ಚದ ಟನೆಲ್ ಯೋಜನೆಗೆ ಪ್ರತಿ ಕಿ.ಮೀಗೆ 500 ಕೋಟಿ ರೂ. ವೆಚ್ಚವಾಗಲಿದೆ. ರಾಷ್ಟ್ರೀಯ ಹೆದ್ದಾರಿಗೂ ಈ ಟನೆಲ್ ಸಂಪರ್ಕಿಸುವುದರಿಂದ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು. ಹೀಗಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಆರ್ಥಿಕ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಮೆಟ್ರೋ ಕಾರಿಡಾರ್ ವಿಸ್ತರಣೆ: ಪ್ರಸಕ್ತ ಮೆಟ್ರೋ ರೈಲು ಮಾರ್ಗಗಳಿಗೆ ಐದು ಕಾರಿಡಾರುಗಳನ್ನು ವಿಸ್ತರಣೆ ಮಾಡಲು ಗುರುತಿಸಲಾಗಿದೆ. ಸುಮಾರು 129 ಕಿ.ಮೀ ಮೆಟ್ರೋ ಮಾರ್ಗವನ್ನು ವಿಸ್ತರಿಸಲು ಯೋಜಿಸಲಾಗಿದೆ. ಈ ಉದ್ದೇಶಿತ ವಿಸ್ತರಿತ ಮೆಟ್ರೋ ಕಾರಿಡಾರ್ ಹೊರ ವರ್ತುಲ ರಸ್ತೆ ಹಾಗೂ ಬೆಂಗಳೂರು ಉಪನಗರವನ್ನು ಸಂಪರ್ಕಿಸುತ್ತದೆ. ಈ ಐದು ಮೆಟ್ರೋ ಕಾರಿಡಾರುಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡುವಂತೆ ಕೋರಿದ್ದಾರೆ.