ಬೆಳಗಾವಿ: ದೆಹಲಿಯ ಐಜಿ ಸ್ಟೇಡಿಯಂನಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನಲ್ಲಿ ಬೆಳಗಾವಿಯ ಕೆಪಿಟಿಸಿಎಲ್ ಮತ್ತು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಸಂಜೀವ್ ಹಮ್ಮನ್ನವರ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಡಿಸೆಂಬರ್ 10 ರಿಂದ 17ರ ವರೆಗೆ ನಡೆದ ಕ್ರೀಡಾಕೂಟದಲ್ಲಿ ಪ್ಯಾರಾ ಟೇಬಲ್ ಟೆನಿಸ್ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಸಂಜೀವ್ ಹಜೇರಿ ವಿರುದ್ಧ 3-0 ಅಂತರದಲ್ಲಿ ಗೆದ್ದಿದ್ದ ಸಂಜೀವ ಹಮ್ಮನ್ನವರ ಫೈನಲ್‌ನಲ್ಲಿ ಹರಿಯಾಣದ ಯಗೇಶ್ ನಾಡಾರ್ ವಿರುದ್ಧ 3-1 ಅಂತರದಿಂದ ಪರಾಭವಗೊಂಡು ಬೆಳ್ಳಿ ಪದಕ್ಕೆ ಭಾಜನರಾಗಿದ್ದಾರೆ.
ಸಂಜೀವ್ ಹಮ್ಮನ್ನವರ ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದು, ಅನೇಕ ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದು ಬೀಗಿದ್ದಾರೆ. ಈಗ ಮತ್ತೆ ಬೆಳ್ಳಿ ಪದಕ ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಚೊಚ್ಚಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್: ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಖೇಲೋ ಇಂಡಿಯಾ ಕ್ರೀಡಾಕೂಟಗಳನ್ನು ಕಳೆದ ಕೆಲ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಕ್ರೀಡಾ ಸಚಿವಾಲಯ ಖೇಲೋ ಇಂಡಿಯಾ ರೀತಿಯ ಕ್ರಿಡಾಕೂಟ ನಡೆಸಿದ್ದರಿಂದ ಅಥ್ಲೆಟಿಕ್ಸ್ನಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದೆ. ಚೀನಾದ ಹ್ಯಾಂಗ್ಝೌನಲ್ಲಿ ನಡೆದ 2023ರ ಏಷ್ಯಾಡ್ನಲ್ಲಿ ಭಾರತ 107 ಪದಕಗಳನ್ನು ಬಾಚಿ ದಾಖಲೆ ನಿರ್ಮಿಸಿತ್ತು. ಅಲ್ಲದೇ ನಡೆದ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲೂ ಭಾರತ 111 ಪದಕಗಳನ್ನು ಗೆದ್ದಿತ್ತು.
ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನಲ್ಲಿ ಹರಿಯಾಣ ರಾಜ್ಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹರಿಯಾಣ 40 ಚಿನ್ನ, 39 ಬೆಳ್ಳಿ ಮತ್ತು 26 ಕಂಚಿನ ಪದಕ ಸೇರಿದಂತೆ ಒಟ್ಟು 105 ಪದಕ ಗೆದ್ದು ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಕರ್ನಾಟಕ 7 ಚಿನ್ನ, 10 ಬೆಳ್ಳಿ ಮತ್ತು 13 ಕಂಚು ಗೆದ್ದು ಒಟ್ಟು 30 ಪದಕದಿಂದ 9ನೇ ಸ್ಥಾನವನ್ನು ಪಡೆದುಕೊಂಡಿದೆ.ಇದರಲ್ಲಿ ಕರ್ನಾಟಕದ ಪ್ಯಾರಾ ಅಥ್ಲೆಟಿಕ್ಸ್: – 3 ಚಿನ್ನ, 6 ಬೆಳ್ಳಿ, 6 ಕಂಚು ಸೇರಿ 15 ಪದಕ. ಪ್ಯಾರಾ ಬ್ಯಾಡ್ಮಿಂಟನ್ – 1 ಚಿನ್ನ, 2 ಬೆಳ್ಳಿ ಮತ್ತು ಕಂಚಿನಿಂದ 5 ಪದಕ. ಪ್ಯಾರಾ ಪವರ್ ಲಿಫ್ಟಿಂಗ್ – 2 ಚಿನ್ನ. ಪ್ಯಾರಾ ಟೇಬಲ್ ಟೆನಿಸ್ – 1 ಚಿನ್ನ, 2 ಬೆಳ್ಳಿ ಮತ್ತು 8 ಕಂಚು ಸೇರಿ 8 ಪದಕಗಳನ್ನು ಗೆದ್ದಿದೆ.