ಮಲಪ್ಪುರಂ(ಕೇರಳ): ಕರ್ನಾಟಕದಿಂದ ಬರುತ್ತಿದ್ದ ಶಬರಿಮಲೆ ಯಾತ್ರಾರ್ಥಿಗಳ ಬಸ್‌ಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಆಟೋದಲ್ಲಿದ್ದ ನಾಲ್ವರು ಪ್ರಯಾಣಿಕರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಈ ಘಟನೆ ಜಿಲ್ಲೆಯ ಮಂಚೇರಿಯಲ್ಲಿ ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಸಂಭವಿಸಿದೆ.
ನಿನ್ನೆ ಸಂಜೆ ಆರು ಗಂಟೆಗೆ ಮಂಚೇರಿ-ಅರೀಕೋಡು ರಸ್ತೆಯ ಚೆಟ್ಟಿಅಂಗಡಿ ಎಂಬಲ್ಲಿ ಅಪಘಾತ ನಡೆದಿದೆ. ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಕರ್ನಾಟಕ ಬಸ್ ಮತ್ತು ಆಟೋ ಮಧ್ಯೆ ಅಪಘಾತವಾಗಿದೆ. ಆಟೋ ಚಾಲಕ ಮಜೀದ್, ವಾಹನದಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಮಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದೆ.
ಕರ್ನಾಟಕದಿಂದ ಅಯ್ಯಪ್ಪ ಭಕ್ತರು ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಆಟೋದಲ್ಲಿ ಆರು ಮಂದಿ ಇದ್ದರು. ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದು, ಗಾಯಾಳು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಶಶಿಧರನ್ ಎಸ್, ಮೋಟಾರು ವಾಹನ ಇಲಾಖೆಯೊಂದಿಗೆ ಪೊಲೀಸರು ಜಂಟಿ ತನಿಖೆ ನಡೆಸಲಿದ್ದಾರೆ. ಅಪಘಾತ ಸ್ಥಳವನ್ನು ಸರಿಯಾಗಿ ಪರಿಶೀಲಿಸಿ ರಸ್ತೆಯಲ್ಲಿ ಏನಾದರೂ ಸಮಸ್ಯೆಗಳಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಮುಂದೆ ಇಂತಹ ಅಪಘಾತಗಳು ಸಂಭವಿಸದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
Laxmi News 24×7