ಬೆಂಗಳೂರು: ಲಿಡ್ಕರ್ ಉತ್ಪನ್ನಗಳ ರಾಯಭಾರಿಯಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ನೇಮಕ ಮಾಡಲಾಗಿದ್ದು, ಅವರು ಉಚಿತವಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 67ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭ ಲಿಡ್ಕರ್ ಉತ್ಪನ್ನಗಳಿಗೆ ನಟ ಡಾಲಿ ಧನಂಜಯ್ ರಾಯಭಾರಿ ಎಂಬುದನ್ನು ಸಿಎಂ ಘೋಷಿಸಿದರು.
ಅವರೋರ್ವ ಜನಪ್ರಿಯ ನಟ ಹಾಗೂ ಸಾಮಾಜಿಕ ಕಳಕಳಿ ಉಳ್ಳವರು. ಅವರನ್ನು ಲಿಡ್ಕರ್ ಉತ್ಪನ್ನಗಳ ರಾಯಭಾರಿಯಾಗಿ ನೇಮಕ ಮಾಡಿರುವುದು ಅರ್ಥಪೂರ್ಣವಾಗಿದೆ. ಈ ಮೂಲಕ ಲಿಡ್ಕರ್ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುವುದಲ್ಲದೇ ಚರ್ಮ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಸಿಎಂ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಡಾಲಿ ಧನಂಜಯ್ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್) ಇದೇ ಮೊದಲ ಬಾರಿಗೆ ರಾಯಭಾರಿಯನ್ನು ಆಯ್ಕೆ ಮಾಡಲಾಗಿದೆ. ಲಿಡ್ಕರ್ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದ್ದು, ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್ವುಡ್ನ ಜನಪ್ರಿಯ ನಟ ಧನಂಜಯ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿದೆ.