ಬೆಳಗಾವಿ: ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲು ಸಿಎಂ ಸಿದ್ದರಾಮಯ್ಯ ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಈ ಎರಡೂ ಪ್ರಕರಣಗಳ ಚಾರ್ಜ್ ಶೀಟ್ ಸಲ್ಲಿಸಿ ವರ್ಷಗಳು ಕಳೆದರೂ ನ್ಯಾಯಾಲಯಗಳಲ್ಲಿ ನಿಧಾನಗತಿಯಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಮೃತರ ಸಂಬಂಧಿಕರು ತಮ್ಮ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಪ್ರಕರಣ ಸಂಬಂಧ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ರಚಿಸುವಂತೆ ಸರ್ಕಾರವನ್ನು ಕೋರಿದ್ದರು.
ಬೆಳಗಾವಿ ಸುವರ್ಣಸೌಧದಲ್ಲಿ ಇಂದು ಒಳಾಡಳಿತ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ನಡೆಸಿ, ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ ಅವರು ಸೆಪ್ಟೆಂಬರ್ 5, 2017 ರಂದು ಹತ್ಯೆಗೀಡಾಗಿದ್ದರು. ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲಾಗಿದೆ. ಇದುವರೆಗೂ 18 ಆರೋಪಿಗಳು ಬಂಧನಕ್ಕೊಳಗಾಗಿದ್ದು, 1200 ಪುರಾವೆ ಹಾಗೂ 500 ಕ್ಕೂ ವಿವಿಧ ಬಗೆಯ ಸಾಕ್ಷ್ಯಗಳನ್ನೊಳಗೊಂಡ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಜುಲೈ, 2022 ರಿಂದ ಪ್ರಾರಂಭಗೊಂಡಿತ್ತು. ನ್ಯಾಯಾಲಯದ ದಿನನಿತ್ಯದ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ವಿಚಾರಣೆಯು ನಿಧಾನಗತಿಯಲ್ಲಿ ಸಾಗಿದೆ. ಆದ್ದರಿಂದ, ಈ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಮೃತರ ಸಹೋದರಿ ಕವಿತಾ ಲಂಕೇಶ್ ಸರ್ಕಾರವನ್ನು ಕೋರಿದ್ದರು