ರಾಯಚೂರು: ಆಟವಾಡುವ ಭರದಲ್ಲಿ ಬಾಲಕನೊಬ್ಬ ಗುಂಡು ಸೂಜಿ ನುಂಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಮುಚ್ಚುಳಗುಡ್ಡ ಕ್ಯಾಂಪ್ನ 13 ವರ್ಷದ ಬಾಲಕ ಶಿವಕುಮಾರ ದೇವರಾಜ ಶಾಲೆಯಲ್ಲಿ ಆಟವಾಡುವ ವೇಳೆ ನೋಟಿಸ್ ಬೋರ್ಡ್ ಅಂಟಿಸುವ ಗುಂಡು ಸೂಜಿಯನ್ನು ಬಾಯಿಯಲ್ಲಿ ಇಟ್ಟುಕೊಂಡಾಗ ಆಕಸ್ಮಿಕವಾಗಿ ನುಂಗಿದ್ದಾನೆ. ಪರಿಣಾಮ ಗುಂಡು ಸೂಜಿಯು ಬಲ ಶ್ವಾಸಕೋಶದೊಳಗಡೆ ಸೇರಿತ್ತು.
ಹೀಗಾಗಿ ಚಿಕಿತ್ಸೆಗಾಗಿ ಬಾಲಕನನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಯಿತು. ದಾಖಲಾದ ಬಾಲಕನ ಶ್ವಾಸಕೋಶದ ಎಕ್ಸ್ ರೇ ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ಸೂಚನಾ ಫಲಕದ ಗುಂಡು ಇರುವುದು ಖಚಿತಪಡಿಸಿಕೊಂಡು, ಆಗ ರಿಮ್ಸ್ ವೈದ್ಯರ ತಂಡ ಬ್ರಾಂಕೋಸ್ಕೋಪ್ ಮೂಲಕ ಗುಂಡು ಸೂಜಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಸ್ತ್ರ ಚಿಕಿತ್ಸೆ ತಂಡದಲ್ಲಿ ಇಎನ್‌ಟಿ ತಜ್ಞ ವೈದ್ಯ ಡಾ. ಅರವಿಂದ್ ಸಂಗವಿ, ಅರವಳಿಕೆ ತಜ್ಞ ವೈದ್ಯ ಡಾ.ಕಿರಣ ನಾಯಕ, ಡಾ. ಮಲ್ಲಿಕಾರ್ಜುನ್ .ಕೆ ಪಾಟೀಲ್, ಡಾ.ಸಿಂಧು ಪಿಜಿ, ಡಾ.ಇಂದುಮಣಿ, ನರ್ಸಿಂಗ್ ಅಧಿಕಾರಿ ಅಮರೇಶ್ ಸಕ್ರಿ, ಓಟಿ ತಂತ್ರಜ್ಞರಾದ ಲಿಂಗರಾಜ್, ಸುಮನ್ ಕ್ಲ್ಯಾರಿ, ನಾರಾಯಣ, ಶಂಕರ ಸೇರಿದಂತೆ ಇನ್ನಿತರಿದ್ದರು.