ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ನಂತ್ರ, ರೈತರ ಫಸಲು ಹಾನಿಯಾಗಿತ್ತು. ಹೀಗಾಗಿ ರಾಜ್ಯದ ಅನೇಕ ತಾಲೂಕುಗಳನ್ನು ಬರಪೀಡಿತ ತಾಲೂಕು ಅಂತ ಸರ್ಕಾರ ಘೋಷಣೆ ಮಾಡಿದೆ. ಈಗ ಬರ ಪರಿಹಾರ ಪಡೆಯಲು ಅರ್ಹರಿರುವಂತ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಹೆಸರಿರೋರಿಗೆ ಮಾತ್ರ ಪರಿಹಾರ ಸಿಗಲಿದೆ.
ಹಾಗಾದ್ರೇ ನಿಮ್ಮ ಹೆಸರು ಇದ್ಯಾ ಅಂತ ಹೇಗೆ ಚೆಕ್ ಮಾಡೋದು ಅನ್ನೋ ಬಗ್ಗೆ ಮುಂದೆ ಓದಿ.
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ನಂತ್ರ, ಹಲವು ತಾಲ್ಲೂಕುಗಳನ್ನು ಸರ್ಕಾರ ಬರ ಪೀಡಿತ ಅಂತ ಘೋಷಣೆ ಮಾಡಿದೆ. ಈ ತಾಲೂಕಿನಲ್ಲಿನ ರೈತರು ಬರದಿಂದಾಗಿ ಬೆಳೆ ನಾಶಗೊಂಡಿದ್ದರೇ ಬರ ಪರಿಹಾರ ಪಡೆಯಲು ಫ್ರೂಟ್ಸ್ ಐಟಿ ಹೊಂದಿರೋದು ಕಡ್ಡಾಯವಾಗಿದೆ.
2023-24 ನೇ ಸಾಲಿನಲ್ಲಿ ಮುಂಗಾರು ವೈಫಲ್ಯವಾಗಿರುವುದರಿಂದ ರಾಜ್ಯ ವಿವಿಧ ತಾಲ್ಲೂಕಿನಲ್ಲಿ ವಿವಿಧ ಕೃಷಿ ಹಾಗೂ ಇತರೆ ಬೆಳೆಗಳು ಹಾನಿಯಾಗಿರುವ ಕಾರಣ, ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲಿದೆ. ಈ ಬರ ಪರಿಹಾರ ಪಡೆಯಲು ಪ್ರತಿ ತಾಲ್ಲೂಕಿನ ರೈತರು ತಮ್ಮ ಎಲ್ಲ ಪಹಣಿಗಳನ್ನು FRUITS ತಂತ್ರಾಂಶಕ್ಕೆ ನೋಂದಾಯಿಸಿ FID (Farmer ID) ಪಡೆಯಬೇಕಾಗಿರುತ್ತದೆ. ಇದಲ್ಲದೆ FID ಯು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ, PMKISAN ಯೋಜನೆಗಳಿಗೂ ಹಾಗೂ ಕೃಷಿ, ತೋಟಗಾರಿಕೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳಲ್ಲಿ ರೈತರು ಸೌಲಭ್ಯಗಳನ್ನು ಪಡೆಯಲು ಅತ್ಯವಶ್ಯಕವಾಗಿರುತ್ತದೆ.
ಹೊಸದಾಗಿ ID ಮಾಡಿಸಿಕೊಳ್ಳಲು ಹಾಗೂ ಪಹಣಿಗಳನ್ನು ಸೇರ್ಪಡೆ ಮಾಡಿಸಿಕೊಳ್ಳಲು ರೈತರು ತಮ್ಮ ಎಲ್ಲಾ ಪಹಣಿಗಳು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತೋಟಗಾರಿಕೆ ಹಾಗೂ ಗ್ರಾಮ ಆಡಳಿತಾಧಿಕಾರಿ ಕಚೇರಿಗಳನ್ನು ಸಂಪರ್ಕಿಸುವುದು.
ರೈತರೇ ಬರ ಪರಿಹಾರಕ್ಕೆ ನೀವು ಅರ್ಹರಾ ಅಂತ ಹೀಗೆ ಚೆಕ್ ಮಾಡಿ
ಬರ ಪರಿಹಾರವನ್ನು ಪಡೆಯೋದಕ್ಕೆ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿರುವಂತ ಫ್ರೂಟ್ ಐಡಿಯಲ್ಲಿ ರೈತರು ಸೂಕ್ತ ಮಾಹಿತಿ ದಾಖಲಿಸಬೇಕಿದೆ. ಈ ಮಾಹಿತಿಯಂತೆ, ನಿಮಗೆ ನೀಡಿರುವಂತ ಫ್ರೂಟ್ ಐಡಿಯ ಆಧಾರದಲ್ಲಿ, ಅದರಲ್ಲಿ ನಮೂದಿತವಾಗಿರುವಂತ ಸರ್ವೆ ನಂಬರ್ ಗಳ ಆಧಾರ್ ಲಿಂಕ್ ಆಧಾರದ ಮೇಲೆ ಬರ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.