ಬೆಂಗಳೂರು: ಬರ ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತದಿಂದ ತೆರಿಗೆ ಸಂಗ್ರಹದಲ್ಲಿ ತೀವ್ರ ಕುಸಿತವಾಗುವ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದ ಗುರಿಯನ್ನು ತಲುಪಲು ಕಠಿಣ ಪರಿಶ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲನೆಯನ್ನು ಸಿದ್ದರಾಮಯ್ಯ ಶುಕ್ರವಾರ ನಡೆಸಿದರು. 2023-24 ರ ಸಾಲಿಗೆ ರಾಜ್ಯ ಸರ್ಕಾರ ₹1.82 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಿದೆ. ವಾಣಿಜ್ಯ ತೆರಿಗೆ ₹98,650 ಕೋಟಿ, ಅಬಕಾರಿ ₹36,000 ಕೋಟಿ, ನೋಂದಣಿ ಮತ್ತು ಮುದ್ರಾಂಕದಿಂದ ₹25,000 ಕೋಟಿ, ಸಾರಿಗೆ ₹11,500 ಕೋಟಿ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯಿಂದ ₹9,000 ಕೋಟಿ ತೆರಿಗೆ ಸಂಗ್ರಹದ ನಿರೀಕ್ಷೆ ಹೊಂದಿದೆ. ‘ಈ ವರೆಗೆ ₹1.10 ಲಕ್ಷ ಕೋಟಿ ಮಾತ್ರ ಸಂಗ್ರಹಿಸಲಾಗಿದೆ’ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.
ತೆರಿಗೆ ಸಂಗ್ರಹದ ನಿಖರ ಸಂಖ್ಯೆಯನ್ನು ಸರ್ಕಾರ ಬಹಿರಂಗ ಮಾಡಿಲ್ಲ. ಸಾರಿಗೆ ಇಲಾಖೆ ಮಾತ್ರ ನಿಗದಿತ ಗುರಿಯನ್ನು ಸಾಧಿಸಿದೆ. ಉಳಿದ ಇಲಾಖೆಗಳು ಹಿನ್ನಡೆ ಸಾಧಿಸಿವೆ ಎಂಬ ಅಂಶ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.