ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧಗಳು ಸಮರ್ಪಕವಾಗಿ ನೀಡುತ್ತಿಲ್ಲ, ಚಿಕಿತ್ಸೆ ಸರಿ ಇಲ್ಲವೆಂಬ ದೂರುಗಳು ಕೇಳಿಬರುವುದು ಸಾಮಾನ್ಯ. ಆದರೆ, ನಗರದ ಜಿಲ್ಲಾಸ್ಪತ್ರೆಯೊಳಗೆ ಕೆಲ ದಿನಗಳಿಂದ ಮಂಗಗಳ ಉಪಟಳ ಹೆಚ್ಚಾಗಿದ್ದು, ರೋಗಿಗಳು ತಳಮಳಗೊಂಡಿದ್ದಾರೆ.
ಐತಿಹಾಸಿಕ ಕಲ್ಲಿನ ಕೋಟೆ, ನಲ್ಲಿಕಾಯಿ ಸಿದ್ದಪ್ಪನ ಬೆಟ್ಟ, ಚಂದ್ರವಳ್ಳಿ, ಆಡುಮಲ್ಲೇಶ್ವರ ಕಿರು ಮೃಗಾಲಯ ಆವರಣ ಸಾಮಾನ್ಯವಾಗಿ ಕೋತಿಗಳಿಗೆ ಆಶ್ರಯ ತಾಣಗಳಾಗಿವೆ. ಆಹಾರ, ನೀರು ಸಿಗದ ಸಂದರ್ಭ ಎದುರಾದಾಗ ನಗರ ಪ್ರವೇಶಿಸುತ್ತಿವೆ. ಈ ವೇಳೆ ಮನೆಗಳಿಗೆ, ದೇಗುಲಗಳಿಗೆ, ಶಾಲಾ-ಕಾಲೇಜುಗಳ ಬಳಿಯ ಕ್ಯಾಂಟೀನ್‌ಗಳಿಗೆ ನುಗ್ಗುತ್ತಿದ್ದವು. ಆದರೆ, ಕೆಲ ದಿನಗಳಿಂದ ಜಿಲ್ಲಾಸ್ಪತ್ರೆಗೆ ದಾಂಗುಡಿ ಇಡುತ್ತಿವೆ.
ಕಿಟಕಿಯೊಳಗಿನಿಂದ ತಟ್ಟನೆ ಜಿಗಿದು ವಾರ್ಡ್‌ನೊಳಗೆ ನುಗ್ಗುವ ಕೋತಿಗಳ ಕಣ್ಣು ನೇರವಾಗಿ ಆಹಾರ ಪೊಟ್ಟಣಗಳ ಮೇಲೆ ಬೀಳುತ್ತಿದ್ದು, ತೆಗೆದುಕೊಳ್ಳುವ ಭರದಲ್ಲಿ ಹಾಸಿಗೆಯಿಂದ ಹಾಸಿಗೆಗೆ ಹಾರುವಾಗ ರೋಗಿಗಳು ಕೆಲಕ್ಷಣ ಗಾಬರಿಗೂ ಒಳಗಾಗುತ್ತಿದ್ದಾರೆ. ಒಂದು ವೇಳೆ ಕಡಿದರೆ, ಹೇಗಪ್ಪಾ.. ಎಂಬ ಆತಂಕವೂ ಕೆಲವರನ್ನು ಕಾಡುತ್ತಿದೆ.
ಕೋತಿಗಳ ಹಿಂಡು ಜಿಲ್ಲಾಸ್ಪತ್ರೆಯೊಳಗೆ ಬೀಡುಬಿಟ್ಟಿವೆ. ಅಸ್ವಸ್ಥರಾದವರಿಗೆ, ಕೈಕಾಲು ಮುರಿದುಕೊಂಡು ಸುಸ್ತು ಇರುವ ರೋಗಿಗಳು ಡ್ರಿಪ್ ಹಾಕಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವಾಗ ನೀರಿನ ಬಾಟಲಿ ಎಂದು ಭಾವಿಸಿ ಅಲುಗಾಡಿಸುತ್ತಿದ್ದು, ಭಯಭೀತರಾಗುತ್ತಿದ್ದಾರೆ. ರೋಗಿಗಳಿಗೆ ಭದ್ರತೆ ಇಲ್ಲವೆಂದು ಪಾಲಕರು, ಸಂಬಂಧಿಗಳು ಅಸಮಾಧಾನ ಹೊರಹಾಕಿದ್ದಾರೆ.