ಮೈಸೂರು: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿ ಕಳ್ಳ ಬೇಟೆಗಾರರ ಚಲನವಲನ ಅರಿಯಲು ಹಾಗೂ ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಅತ್ಯಾಧುನಿಕ ತಂತ್ರಜ್ಞಾನದ ಗರುಡ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ನಾಗರಹೊಳೆ ಅಭಯಾರಣ್ಯದಲ್ಲಿ ಸಿಸಿಟಿವಿ ಕ್ಯಾಮೆರಾ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಸುಮಾರು 32 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾ ಟವರ್ ನಿರ್ಮಿಸಲಾಗುತ್ತಿದ್ದು, ಈ ಗರುಡ ಸಿಸಿಟಿವಿ ಕ್ಯಾಮೆರಾದ ವಿಶೇಷತೆ, ಕಾರ್ಯವೈಖರಿ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಅರಣ್ಯ ಇಲಾಖೆಗೆ ಕ್ಷಣದಲ್ಲಿಯೇ ಮಾಹಿತಿ : ಗರುಡ ಹೆಸರಿನ ಸಿಸಿಟಿವಿ ಕ್ಯಾಮೆರಾವನ್ನು ನಾಗರಹೊಳೆ ಅಭಯಾರಣ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳು, ಕಳ್ಳಬೇಟೆಗಾರರ ಚಲನವಲನ ಮೇಲೆ ನಿಗಾ ಇಡಲು, ಹುಲಿ ಮತ್ತು ಆನೆಗಳ ಚಲನವಲನ, ಯಾವ ಸಮಯದಲ್ಲಿ ಹಾದು ಹೋಗಿದೆ, ಆನೆಗಳ ಹಿಂಡು ಕಾಣಿಸಿಕೊಂಡಿದೆಯೇ ಅಥವಾ ಒಂಟಿ ಆನೆಯೇ, ಕಳ್ಳ ಬೇಟೆಗಾರರು ಒಳ ನುಸುಳಿದ್ದಾರೆಯೇ? ಯಾವ ಸಂದರ್ಭದಲ್ಲಿ ನುಸುಳಿದರು, ಅವರ ಬಳಿ ಶಸ್ತ್ರಾಸ್ತ್ರಗಳು ಇವೆಯೇ ಎಂಬುದನ್ನೆಲ್ಲ ಗುರುತಿಸುವ ಸಾಮರ್ಥ್ಯ ವಿಶೇಷವಾಗಿ ಗರುಡ ಸಿಸಿಟಿವಿ ಕ್ಯಾಮೆರಾಗೆ ಇದೆ.
ಯಾವುದೇ ವ್ಯಕ್ತಿ ಮತ್ತು ವನ್ಯಜೀವಿ ಚಲಿಸಿದರೂ ಅವರ ಫೋಟೊ ಸೆರೆ ಹಿಡಿದು ಎಲ್ಲ ಕಡೆ ರವಾನಿಸಲಿದೆ. ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿದ ಪೋಟೊವನ್ನು ಇಲಾಖೆಗೆ ರವಾನಿಸಿ ಮಾಹಿತಿ ನೀಡುತ್ತದೆ. ಸಿಸಿಟಿವಿ ಕ್ಯಾಮೆರಾಗಳಿಂದ ಅರಣ್ಯ ಇಲಾಖೆಯವರು ಸ್ಥಳೀಯ ಗ್ರಾಮದ ಜನರಿಗೆ ಸೂಚನೆ ನೀಡಲು ಅನುಕೂಲವಾಗಲಿದೆ.
32 ಲಕ್ಷ ರೂಪಾಯಿ ವೆಚ್ಚದ ಈ ನೂತನ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಟಿವಿಎಸ್, ಎಸ್ ಎಸ್ ಟಿ ಕಂಪನಿ ವಹಿಸಿಕೊಂಡಿದೆ. ಜಿಐ ಬೇಸ್ಡ್ ತಂತ್ರಜ್ಞಾನವನ್ನು ಬೆಂಗಳೂರು ಮೂಲದ ಅಲ್ಡಾಯಿಸ್ ಸಂಸ್ಥೆ ನಿರ್ವಹಿಸುತ್ತಿದೆ.