ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಲ್ಲ ಹಬ್ಬ, ಉತ್ಸವಗಳನ್ನು ಅದ್ಧೂರಿ ಮತ್ತು ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ದೀಪಾವಳಿ ಹಬ್ಬದ ಗುಡಿ ಪಾಡವಾ ನಿಮಿತ್ತ ನಗರದ ವಿವಿಧೆಡೆ ಆಯೋಜಿಸಿದ್ದ ಎಮ್ಮೆಗಳ ಓಟ ನೋಡುಗರನ್ನು ರೋಮಾಂಚನಗೊಳಿಸಿತು. ಎಮ್ಮೆಗಳ ವೈಯ್ಯಾರ, ಶೃಂಗಾರಕ್ಕೆ ಜನ ಮನಸೋತರು.
ಎಮ್ಮೆ ಇಲ್ಲಿನ ಗೌಳಿಗರ ಪಾಲಿನ ನಿಜವಾದ ಲಕ್ಷ್ಮೀ ದೇವಿ. ವರ್ಷಪೂರ್ತಿ ಎಮ್ಮೆಗಳನ್ನು ಚೆನ್ನಾಗಿ ಮೇಯಿಸಿ, ಹಾಲು ಕರೆದು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಶ್ರಮಿಸುವ ಇವರು, ದೀಪಾವಳಿ ಬಂತು ಎಂದರೆ ಸಾಕು ಎಮ್ಮೆಗಳನ್ನು ಶೃಂಗರಿಸಿ, ಹುರಿಗೊಳಿಸಿ ಓಟದಲ್ಲಿ ಎಮ್ಮೆಗಳನ್ನು ಓಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಎಮ್ಮೆಗಳ ಓಟದ ಸಂಭ್ರಮದಲ್ಲಿ ಗೌಳಿಗರು, ಎಮ್ಮೆ ಪ್ರಿಯರು ಮಿಂದೆದ್ದರು.
ಬೆಳಗಾವಿ ಚವಾಟ ಗಲ್ಲಿ, ಕ್ಯಾಂಪ್ ಪ್ರದೇಶ, ಟಿಳಕವಾಡಿಯ ಗೌಳಿ ಗಲ್ಲಿ, ಗೊಂಧಳಿ ಗಲ್ಲಿ, ಗಾಂಧಿ ನಗರ, ವಡಗಾವಿ, ಕೋನವಾಳ ಗಲ್ಲಿ, ಶುಕ್ರವಾರ ಪೇಟೆ ಸೇರಿದಂತೆ ವಿವಿಧೆಡೆ ಇಂದು ಬಲಿಪಾಡ್ಯಮಿಯ ದಿನ ಎಮ್ಮೆಗಳ ಓಟ ಆಯೋಜಿಸಲಾಗಿತ್ತು. ಎಮ್ಮೆಗಳಿಗೆ ಕವಡೆ ಸರ, ಕೋಡುಗಳಿಗೆ ಬಣ್ಣ ಬಳಿದು, ನವಿಲು ಗರಿಯಿಂದ ಶೃಂಗರಿಸಿದ್ದ ಎಮ್ಮೆಗಳು ಎಲ್ಲರ ಗಮನ ಸೆಳೆದವು.