ಬೆಳಗಾವಿ: ಲಿಂಗಾಯತ ಸಮುದಾಯದ ಮತ ಬ್ಯಾಂಕ್ ನೋಡಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಮಾಡಿದ್ದಾರೆ.
ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ, ಅವರ ಆಯ್ಕೆ ಮಾಡಿರಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಕೂಡ ಒಂದು ಕಾರಣ. ಇನ್ನು ಬಿಜೆಪಿಯಲ್ಲೂ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸ್ಥಾನಮಾನ ನೀಡುವ ಪರಿಪಾಠ ಶುರುವಾಗಿದೆ. ನಮ್ಮಲ್ಲಿ ಮುಂಚೆಯಿಂದನೂ ಇದೆ. ಈಗ ಬಿಜೆಪಿಯಲ್ಲಿ ಶುರುವಾಗಿದೆ. ನಮ್ಮನ್ನು ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಆದರೆ ಹತ್ತು ವರ್ಷಗಳಿಂದ ಬಿಜೆಪಿಯಲ್ಲೂ ಅದು ಜಾರಿಗೆ ಬಂದಿದೆ ಎಂದು ಛೇಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ವಿಚಾರಕ್ಕೆ ಅವರ ಪಕ್ಷಕ್ಕೆ ಅನುಕೂಲ ಆಗಲಿ ಅಂತಾ ಮಾಡಿದ್ದಾರೆ. ಯಡಿಯೂರಪ್ಪ ಮಾತ್ರ ಅವರಲ್ಲಿ ಪ್ರಬಲ ನಾಯಕ. ಅವರನ್ನು ಬಿಟ್ಟು ಯಾರನ್ನೇ ಮಾಡಿದ್ರೂ ಅವರಿಗಿದ್ದ ಆಕರ್ಷಣೆ ಯಾರಿಗೂ ಬರಲ್ಲ. ನಮ್ಮಲ್ಲಿ ಸಿದ್ದರಾಮಯ್ಯ ಅವರು ಆ ರೀತಿ ಆಕರ್ಷಣೆ ಹೊಂದಿದ್ದಾರೆ. ಒಂದೊಂದು ಪಕ್ಷದಲ್ಲಿ ಒಬ್ಬೊಬ್ಬರು ಆಕರ್ಷಣೆ ಇರ್ತಾರೆ. ಯಡಿಯೂರಪ್ಪ ರೀತಿ ವಿಜಯೇಂದ್ರ ಆಕರ್ಷಣೆ ಇಲ್ಲ ಎಂದರು.
ವಿಜಯೇಂದ್ರ ಯಡಿಯೂರಪ್ಪ ಅವರ ರೀತಿ ನಾಯಕತ್ವ ಬೆಳೆಸಿಕೊಳ್ಳಬೇಕು. ಯಡಿಯೂರಪ್ಪ ಅವರ ಮಗ ಅಂದ ಕೂಡಲೇ ಎಲ್ಲಾ ಅವರೊಂದಿಗೆ ಬರುವುದಿಲ್ಲ. ವಿಜಯೇಂದ್ರ ಬಹಳಷ್ಟು ಕಲಿಯಬೇಕಿದೆ, ಹೋಗಬೇಕಿದೆ. ಇನ್ನೂ ಗುರುತಿಸಿಕೊಳ್ಳಬೇಕಿದೆ, ಪಕ್ಷ ಇನ್ನೂ ಸಹಕಾರ ಮಾಡಬೇಕಿದೆ. ಬಿಜೆಪಿಯಲ್ಲಿ ಅಸಮಾಧಾನ ಏಳುವ ಸಾಧ್ಯತೆ ಇದೆ ಎಂಬ ಪ್ರಶ್ನೆಗೆ, ಪಕ್ಷ ಅಂದ ಮೇಲೆ ಮೂರು ಗುಂಪುಗಳು ಇದ್ದೇ ಇರ್ತವೆ. ಒಂದನ್ನು ಸಮಾಧಾನ ಮಾಡಿದ್ರೇ ಎರಡು ದೂರ ಹೋಗುತ್ತೆ. ಅದನ್ನ ಬ್ಯಾಲೆನ್ಸ್ ಮಾಡುವ ಶಕ್ತಿ ಅವರಿಗೆ ಇರಬೇಕು ಎಂದರು.