ರಾಮನಗರ: ಬಿಡದಿಯು ಕೈಗಾರಿಕಾ ಪ್ರದೇಶವಾಗಿದ್ದು, ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಉದ್ಯೋಗ ಮಾಡುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಬಿಡದಿಗೆ ನಮ್ಮ ಮೆಟ್ರೋ ಘೋಷಣೆ ಮಾಡಲಾಗಿದೆ. ಹಾಗೆಯೇ ಇನ್ನು ಮುಂದೆ ಬಿಡದಿ ಪ್ರಾಧಿಕಾರ ಹೆಸರಿಗೆ ಬದಲಾಗಿ ಗ್ರೇಟರ್ ಬೆಂಗಳೂರು ಎಂಬ ಹೊಸ ನಾಮಕರಣ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ನಮ್ಮ ಮೆಟ್ರೋ ಮಾಡುವ ಬಗ್ಗೆ ಇಲ್ಲಿನ ಎಂಎಲ್‌ಎ ಹಾಗೂ ಎಂಪಿಗಳು ಮನವಿ ಮಾಡಿದ್ದರು. ಈ ಬಗ್ಗೆ ಕರ್ನಾಟಕದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಡಿಪಿಆರ್ ಮಾಡಲು ಸೂಚಿಸಿದ್ದೇನೆ. ಹಿಂದೆ ಬಿಡದಿ ಸ್ಮಾರ್ಟ್ ಸಿಟಿಗಾಗಿ ಹತ್ತು ಸಾವಿರ ಎಕರೆ ಜಾಗ ವಶ ಪಡಿಸಿಕೊಳ್ಳಲಾಗಿತ್ತು. ಆದರೆ ಅದು ಹಾಗೆಯೆ ಉಳಿದುಕೊಂಡಿದೆ.
ಹೀಗಾಗಿ ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಪ್ಲ್ಯಾನಿಂಗ್ಗೆ ಬಿಡದಿ ಘೋಷಿಸಲಾಗಿದೆ. ಮುಂದೆ ಲೀಗಲ್ ಪ್ರೊಸಿಜರ್ ಆಗಲಿದೆ. ಎಲ್ಲರಿಗೂ ಶಕ್ತಿ ತುಂಬುವ ದೃಷ್ಟಿಯಿಂದ ಈ ಘೋಷಣೆಗಳನ್ನು ಮಾಡಲಾಗುತ್ತಿದೆ. ಈ ನಿಟ್ಟಿನಿಂದ ಸ್ಥಳೀಯರಿಗೆ ಉದ್ಯೋಗಕ್ಕಾಗಿ ಪ್ರತ್ಯೇಕ ಸಭೆ ನಡೆಸಿ, ಎಲ್ಲ ಕಾರ್ಖಾನೆಗಳ ಬಳಿ ಮನವಿ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಗೆಯೇ ರಾಮನಗರಕ್ಕೆ ಮರುನಾಮಕರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಬೆಂಗಳೂರಿನವರು. ನಮ್ಮ ಮೂಲ ಹೆಸರನ್ನು ನಾವು ಕೆಳದುಕೊಳ್ಳುವುದಿಲ್ಲ. ಹೀಗಾಗಿ ಬೆಂಗಳೂರು ದಕ್ಷಿಣವನ್ನಾಗಿ ಜಿಲ್ಲೆಯ ಹೆಸರು ಬದಲಿಸುವ ಬಗ್ಗೆ ಜನರಿಂದ ಅಭಿಪ್ರಾಯ ಕೇಳಲಾಗುತ್ತಿದೆ. ಬಳಿಕ ಸರ್ಕಾರದ ಮುಂದಿಟ್ಟು ಬದಲಾವಣೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.