ಚೆನ್ನೈ (ತಮಿಳುನಾಡು): ರಸ್ತೆ ಅಪಘಾತದಿಂದ ಮೃತಪಟ್ಟ ವ್ಯಕ್ತಿಯ ಅಂಗಾಂಗ ದಾನ ಮಾಡುವ ಮೂಲಕ ಆತನ ಕುಟುಂಬಸ್ಥರು ಸಾರ್ಥಕತೆ ಮೆರೆದಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ತಿರುಪತಿಯ ಚಿತ್ತೂರು ರಾಘವೇಂದ್ರ ನಗರದ ನಿವಾಸಿಯಾದ ಯುವರಾಜುಲು ನಾಯ್ಡು (61) ಅವರು, ನವೆಂಬರ್ 3 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.
ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಾಶತ್ ಅವರು ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 7ರ ಸಂಜೆ 5.52ಕ್ಕೆ ನಿಧನರಾಗಿದ್ದರು.
ನಂತರ ಯುವರಾಜುಲು ನಾಯ್ಡು ಅವರ ಪತ್ನಿ ಅತುಶುಪಲ್ಲಿ, ಮಗಳು ಅತುಶ್ಮಿಲ್ಲಿ ಸಿರಿಶಾ, ಮಗ ನಿತೀಶ್ ಕುಮಾರ್ ಮಿಥು ಹಾಗೂ ಇತರ ಕುಟುಂಬಸ್ಥರು ಯುವರಾಜುಲು ಅವರ ಎರಡು ಕಣ್ಣುಗಳು, ಎರಡು ಮೂತ್ರಪಿಂಡಗಳು, ಹೃದಯ, ಯಕೃತ್ತು, ಶ್ವಾಸಕೋಶ, ಕರುಳು ಮತ್ತು ಹೃದಯ ಕವಾಟಗಳನ್ನು ದಾನ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಇದಾದ ಬಳಿಕ ತಮಿಳುನಾಡು ಸರ್ಕಾರದ ಪರವಾಗಿ ಕೇಂದ್ರ ಕಂದಾಯ ವಿಭಾಗಾಧಿಕಾರಿ ಪಿ.ಕ್ಯೂರಿ ಹಾಗೂ ಎಗ್ಮೋರ್ ಅಧಿಕಾರಿ ಶಿವಕುಮಾರ್ ಅವರು, ನಿನ್ನೆ (ಗುರುವಾರ) ಆಸ್ಪತ್ರೆಗೆ ಭೇಟಿ ನೀಡಿ ಮೃತ ಯುವರಾಜುಲು ನಾಯ್ಡು ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.