ನವದೆಹಲಿ: ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಚಳಿಗಾಲದ ಸಂಸತ್ ಅಧಿವೇಶನ ಡಿಸೆಂಬರ್ 4 ರಿಂದ ಆರಂಭವಾಗಲಿದೆ. ಡಿಸೆಂಬರ್ 22 ರವರೆಗೆ ಅಂದರೆ 19 ದಿನಗಳ ಕಾಲ ನಡೆಯಲಿದೆ.
ಇಷ್ಟು ದಿನಗಳಲ್ಲಿ 15 ಕಲಾಪಗಳನ್ನು ನಡೆಸಲು ಕೇಂದ್ರ ಸರ್ಕಾರ ಯೋಜಿಸಿದೆ.
ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ (ಟ್ವಿಟರ್) ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ಅಮೃತ ಕಾಲದ ಅಧಿವೇಶನದಲ್ಲಿ ಸರ್ಕಾರದ ಕಾರ್ಯಗಳು ಮತ್ತು ಇತರ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಯ ಫಲಿತಾಂಶವು ಡಿಸೆಂಬರ್ 3 ರಂದು ಪ್ರಕಟಿಟವಾಗಲಿದೆ. ಇದಾದ ಮರುದಿನವೇ ಹೊಸ ಸಂಸತ್ ಭವನದಲ್ಲಿ ಮೊದಲ ಪೂರ್ಣ ಅಧಿವೇಶನ ನಡೆಯಲಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್‌ನಲ್ಲಿ ಪ್ರಾರಂಭವಾಗುತ್ತಿತ್ತು. ಆದರೆ, ಪಂಚ ರಾಜ್ಯಗಳ ಚುನಾವಣೆ ಕಾರಣ ಈ ಬಾರಿ ಡಿಸೆಂಬರ್‌ಗೆ ಮುಂದೂಡಲಾಗಿತ್ತು.
ವಿವಿಧ ಬಿಲ್ಗಳ ಮಂಡನೆ ಸಾಧ್ಯತೆ: ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಆಯಕ್ಟ್ ಅನ್ನು ಬದಲಿಸಲು ಬಯಸುವ ಪ್ರಮುಖ ಮೂರು ಮಸೂದೆಗಳನ್ನು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸುವ ಸಾಧ್ಯತೆಯಿದೆ. ಜೊತೆಗೆ ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕದ ಮಸೂದೆ ಸೇರಿದಂತೆ ಹಲವು ಬಿಲ್ಗಳು ಮಂಡನೆಯಾಗುವ ಸಂಭವವಿದೆ.
ಚುನಾವಣಾ ಆಯುಕ್ತರ ಬಿಲ್ ಅನ್ನು ಮುಂಗಾರು ಅಧಿವೇಶನದಲ್ಲಿ ಮಂಡನೆ ಮಾಡಲಾಯಿತು. ಪ್ರತಿಪಕ್ಷಗಳು ಮತ್ತು ಮಾಜಿ ಮುಖ್ಯ ಚುನಾವಣಾ ಆಯುಕ್ತರ ವಿರೋಧದಿಂದಾಗಿ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈ ತಿದ್ದುಪಡಿ ಕಾಯ್ದೆಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರಿಗೆ ಕ್ಯಾಬಿನೆಟ್ ಸಚಿವ ಸ್ಥಾನಮಾನ ನೀಡಲಿದೆ. ಆದರೆ, ಪ್ರಸ್ತುತ ಅವರ ಸ್ಥಾನಮಾನ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಿಗೆ ಸಮಾನವಾಗಿದೆ. ಹೀಗಾಗಿ ಇದರ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ.
Laxmi News 24×7