ಬೆಂಗಳೂರು: ಗ್ಯಾರಂಟಿ ಯೋಜನೆಯಡಿ ಮಹಿಳೆಯರ ಹಣಕಾಸಿನ ನೆರವಿನ ಉಳಿತಾಯಕ್ಕೆ ರಾಜ್ಯ ಸರ್ಕಾರ ಹೊಸ ಯೋಜನೆ ರೂಪಿಸುತ್ತಿದ್ದು, ಶೀಘ್ರದಲ್ಲೇ ಆಯಪ್ವೊಂದನ್ನು ಸರ್ಕಾರ ಬಿಡುಗಡೆ ಮಾಡಲಿದೆ.
ಪ್ರತಿ ಕುಟುಂಬ ಪ್ರತಿ ತಿಂಗಳು ಅಂದಾಜು 4 ಸಾವಿರದಿಂದ 5 ಸಾವಿರ ರೂ. ಹಣಕಾಸು ನೆರವು ಪಡೆಯುತ್ತಿದ್ದು, ಜನರಲ್ಲಿ ಉಳಿತಾಯ ಮನೋಭಾವ ಬೆಳೆಸಿ ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ 93 ಲಕ್ಷ ಮಹಿಳೆಯರು ಪ್ರತಿ ತಿಂಗಳು 2,000 ರೂ.ಪಡೆಯುತ್ತಿದ್ದು, ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದಲೂ ಹಣವನ್ನು ಉಳಿಸುತ್ತಿದ್ದಾರೆ. ಈ ಮಹಿಳೆಯರಿಗೆ ಹಣ ಉಳಿತಾಯ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ, 305 ಕೋಟಿ ರೂ. ವಹಿವಾಟು ಮತ್ತು 22,000 ಕಡಿಮೆ ಚಂದಾದಾರರನ್ನು ಹೊಂದಿರುವ ಎಂಎಸ್ಐಎಲ್ ನಡೆಸುತ್ತಿರುವ ಚಿಟ್ ಫಂಡ್ ವ್ಯವಹಾರ ವಿಸ್ತರಿಸಲು ನಿರ್ಧರಿಸಲಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಎಂಎಸ್ಐಎಲ್ ಭಾರತದ ಪ್ರಮುಖ ಚಿಟ್ ಫಂಡ್ಗಳಲ್ಲಿ ಒಂದು. ಚಿಟ್ ಫಂಡ್ ವಲಯವನ್ನು ಉನ್ನತ ಸ್ಥಾನಕ್ಕೆ ಒಯ್ಯಲು ಕರ್ನಾಟಕವು ಮಹತ್ತರ ಪ್ರಯಾಣ ಆರಂಭಿಸುತ್ತಿದೆ ಎಂದು ತಿಳಿಸಿದ್ದಾರೆ.