ಧಾರವಾಡ : ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳಾಗಿವೆ.
ಒಬ್ಬೊಬ್ಬರದು ಒಂದೊಂದು ಗುಂಪು. ಪರಮೇಶ್ವರದ್ದು ದಲಿತರ ಗುಂಪು. ಸಿದ್ದರಾಮಯ್ಯನವರದು ಹಿಂದುಳಿದವರ ಗುಂಪು. ಡಿಕೆಶಿಯದ್ದು ಗೌಡರ ಗುಂಪಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಮೇಶ್ವರ್ ಮನೆಯಲ್ಲಿ ದಲಿತರ ಸಭೆ ಮಾಡುತ್ತಾರೆ. ಸಿದ್ದರಾಮಯ್ಯ ಪರವಾಗಿ ಹಿಂದುಳಿದವರ ಸಭೆ ಆಯ್ತು. ಸಿದ್ದರಾಮಯ್ಯ ಪರವಾಗಿ ಡಿನ್ನರ್ ಸಭೆ ಆಗಿತ್ತು. ಆದರೆ ಯಾರೂ ಎಚ್.ಕೆ. ಪಾಟೀಲರನ್ನು ಕರೆದಿರಲಿಲ್ಲ. ಅವರೊಬ್ಬ ಪ್ರತಿಷ್ಠಿತ ರಾಜಕಾರಣಿ. ಸಿಎಂ ಆಗಲಿಕ್ಕೆ ಡಿಕೆಶಿ ಎಲ್ಲ ಕಡೆ ಓಡಾಡುತ್ತಿದ್ದಾರೆ. ಕುಮಾರಸ್ವಾಮಿ ಕಡೆ ಕೂಡ ಹೋಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಕಣ್ಣೀರು ಹಾಕಿಸಿದೆ ಅಂತಾ ಆರೋಪಿಸಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಲಿಂಗಾಯತರ ಪರಿಸ್ಥಿತಿ ಈಗ ಎರಡನೇ ದರ್ಜೆ ಪ್ರಜೆ ಆಗಿದೆ. ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
7 ಜನ ಮಂತ್ರಿಗಳು ಗೌಡರ ಲೆಕ್ಕದಲ್ಲಿ ಇಲ್ಲ, ಕುಲಕರ್ಣಿ ಬುಕ್‌ನಲ್ಲಿಯೂ ಇಲ್ಲ. ಲಿಂಗಾಯತರ ಸ್ಥಿತಿ ಅಲೆಮಾರಿಗಳ ಪರಿಸ್ಥಿತಿ ಆದಂಗೆ ಆಗಿದೆ. ಅಪಪ್ರಚಾರ ಮಾಡಿ ವೋಟು ಹಾಕಿಸಿಕೊಂಡರು. ಕಾಂಗ್ರೆಸ್ ಮೊದಲಿನಿಂದಲೂ ಲಿಂಗಾಯತರಿಗೆ ಮರ್ಯಾದೆ ಕೊಡಲಿಲ್ಲ. ಎಸ್ ನಿಜಲಿಂಗಪ್ಪ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಆಗಿದ್ರು. ಕಾಂಗ್ರೆಸ್ ಇಬ್ಭಾಗ ಮಾಡಿ ಅವರನ್ನ ಹೊರಗೆ ದಬ್ಬಿದ್ರು. ವಿರೇಂದ್ರ ಪಾಟೀಲ್ ಅವರನ್ನ ಸಿಎಂ ಹುದ್ದೆಯಿಂದ ಡಿಸ್ಮಿಸ್ ಮಾಡಿದ್ರು. ರಾಜಶೇಖರಮೂರ್ತಿಯವರನ್ನು ಕಾಂಗ್ರೆಸ್ನಿಂದ ವಜಾ ಮಾಡಿದ್ರು. ಇದು ಕಾಂಗ್ರೆಸ್ ನೀತಿ. ಶಾಮನೂರ ಶಿವಶಂಕರಪ್ಪ ಕಾಂಗ್ರೆಸ್ ಖಜಾಂಚಿಯಾಗಿದ್ದವರು. ಈಗ ಪರಿಸ್ಥಿತಿ ಏನಾಗಿದೆ ನೋಡಿ ಅಂತಾ ಕಾರಜೋಳ ಹೇಳಿದ್ರು.
ರಾಜ್ಯ ಸರ್ಕಾರ ಆದಷ್ಟು ಬೇಗ ಬರ ಪರಿಹಾರ ಕಾರ್ಯ ಆರಂಭಿಸಬೇಕು. ಇಲ್ಲದೆ ಹೋದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಸರ್ಕಾರದ ವಿರುದ್ಧ ಜನ ಧಂಗೆ ಏಳುವಂತೆ ಮಾಡುತ್ತೇವೆ. ಸಿಎಂ ಹಾಗೂ ಅವರ ಪಾರ್ಟನರ್ ಡಿಕೆಶಿಗೆ ನಾವು ಒತ್ತಾಯ ಮಾಡುತ್ತೇವೆ. ಬರ ಪರಿಹಾರ ಕೆಲಸ ಆರಂಭಿಸಿ ಎಂದು ಹೇಳುತ್ತೇವೆ. ಬಡವರ ಜೀವನ ಮೋದಿ ಅಕ್ಕಿ ಮೇಲೆ ನಡೆದಿದೆ ಎಂದರು.