ಮುಂಬೈ (ಮಹಾರಾಷ್ಟ್ರ): ರನ್ ಮಷಿನ್ ಎಂದೇ ಕೆರೆಸಿಕೊಳ್ಳುವ ವಿರಾಟ್ ಕೊಹ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಅದಕ್ಕೆ ಪೂರಕ ಎಂಬಂತೆ ಆಟವನ್ನು ಆಡುತ್ತಿದ್ದಾರೆ.
2023ರ ವಿಶ್ವಕಪ್ನಲ್ಲಿ ಎರಡನೇ ಶತಕವನ್ನು ವಿರಾಟ್ ದಾಖಲಿಸಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ಶತಕದ ದಾಖಲೆಯನ್ನು ಸಮಮಾಡಿಕೊಂಡಿದ್ದಾರೆ. ಇಬ್ಬರೂ ವಿಶ್ವ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಜಂಟಿಯಾಗಿ ಅಲಂಕರಿಸಿದ್ದಾರೆ.
ಸಚಿನ್ ಅವರ ದಾಖಲೆಯನ್ನು ವಿರಾಟ್ ಸರಿಗಟ್ಟಿದ ನಿಮಿಷದಲ್ಲಿ ಎಕ್ಸ್ ಆಯಪ್ನಲ್ಲಿ ತೆಂಡೂಲ್ಕರ್ ಶುಭಾಶಯದ ಕೋರಿದ್ದಾರೆ. “ಚೆನ್ನಾಗಿ ಆಡಿದೆ ವಿರಾಟ್. ಈ ವರ್ಷದ ಆರಂಭದಲ್ಲಿ 49 ರಿಂದ 50ಕ್ಕೆ ಹೋಗಲು ನನಗೆ 365 ದಿನಗಳು ಬೇಕಾಯಿತು. ನೀವು 49 ರಿಂದ 50ಕ್ಕೆ ಬೇಗ ಹೋಗಿ ಮತ್ತು ಮುಂದಿನ ದಿನಗಳಲ್ಲಿ ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಭಿನಂದನೆಗಳು !!”ಪೋಸ್ಟ್ ಮಾಡಿದ್ದಾರೆ.
ಇತ್ತಿಚೆಗೆ ಸಚಿನ್ ತೆಂಡೂಲ್ಕರ್ ತಮ್ಮ 50ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಇದನ್ನೇ ಉಲ್ಲೇಖಿಸಿ ಸಚಿನ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ನನಗೆ 49 ರಿಂದ 50ಕ್ಕೆ ಹೋಗಲು 365 ದಿನ ಬೇಕಾಯಿತು, ಈ ದಿನಗಳ ಅಂತರಕ್ಕಿಂತ ಮೊದಲು 50 ಶತಕ ಮಾಡಿ ನನ್ನ ದಾಖಲೆ ಮುರಿಯಿರಿ ಎಂದು ಹಾರೈಸಿದ್ದಾರೆ.
ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ತನ್ನ 8ನೇ ಲೀಗ್ ಪಂದ್ಯವನ್ನು ಈಡನ್ ಗಾರ್ಡನ್ಸ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿದೆ. ಇದರಲ್ಲಿ 6 ಓವರ್ಗೆ ರೋಹಿತ್ ವಿಕೆಟ್ ಹೋದ ನಂತರ ಮೈದಾನಕ್ಕೆ ಇಳಿದ ವಿರಾಟ್ ಅಜೇಯವಾಗಿ ಇನ್ನಿಂಗ್ಸ್ ಕಟ್ಟಿದರು. ಇಂದು 35ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ವಿರಾಟ್ ತಮ್ಮ ಶತಕದ ಮೂಲಕ ಅಭಿಮಾನಿಗಳಿಗೆ ರಸದೌತಣವನ್ನೇ ನೀಡಿದರು.
ಅಯ್ಯರ್ ಮತ್ತು ವಿರಾಟ್ ಶತಕದ ಜೊತೆಯಾಟ ಮಾಡಿದ್ದು ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕುವಲ್ಲಿ ಸಹಕಾರಿ ಆಯಿತು. ಟೀಮ್ ಇಂಡಿಯಾ ವಿರಾಟ್ ಅವರ 101 ರನ್ನ ಇನ್ನಿಂಗ್ಸ್ ಮತ್ತು ಅಯ್ಯರ್ ಅವರ 77 ರನ್ನ ಬಲದಿಂದ 326 ಮೊತ್ತವನ್ನು ಕಲೆಹಾಕಿತು.