ಬೆಳಗಾವಿ: ಹೊಸದಾಗಿ ರೈತರ ಕೃಷಿ ಪಂಪಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅಕ್ರಮ ಸಕ್ರಮ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ಮೊದಲೇ ಬರದಿಂದ ಕಂಗೆಟ್ಟಿರುವ ರೈತರಿಗೆ ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಬೆಳಗಾವಿ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಒಮ್ಮೆ ನೆರೆ, ಮತ್ತೊಮ್ಮೆ ಬರದಿಂದಾಗಿ ರಾಜ್ಯದ ರೈತರ ಸ್ಥಿತಿ ಹದಗೆಟ್ಟಿದೆ. ಈ ನಡುವೆ ಸೆಪ್ಟೆಂಬರ್ 22ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ರೈತರನ್ನು ಕಂಗಾಲಾಗುವಂತೆ ಮಾಡಿದೆ.
ರಾಜ್ಯಾದ್ಯಂತ ವಿವಿಧ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿರುವ ರೈತರ ಒಟ್ಟು 2 ಲಕ್ಷ ಅಕ್ರಮ ಕೃಷಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲು 6,099 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 2015 ರಿಂದ 22 ಸೆಪ್ಟೆಂಬರ್ 2023ರ ವರೆಗೆ ಈಗಾಗಲೇ ಚಾಲ್ತಿಯಲ್ಲಿರುವ ಐಪಿ ಸೆಟ್ ಗಳು ಸಕ್ರಮ ವ್ಯಾಪ್ತಿಗೆ ಬರುತ್ತವೆ. ಆದರೆ, 23 ಸೆಪ್ಟೆಂಬರ್ 2023 ರ ನಂತರ ಕೃಷಿ ಪಂಪ್ಸೆಟ್ ಗಳಿಗೆ ಯಾರಾದರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದರೆ ಸಕ್ರಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ತೀರ್ಮಾನ ಕೈಗೊಂಡಿದೆ.
ಈ ಮೊದಲು ರೈತರು ಕೊರೆಸುವಂತಹ ಕೊಳವೆ ಬಾವಿಗಳಿಗೆ 500 ಮೀಟರ್ ವರೆಗೆ ಸಂಪರ್ಕ ಕಲ್ಪಿಸುವ ಉಚಿತ ಯೋಜನೆ ಅದಾಗಿತ್ತು. ರೈತರು ಅಕ್ರಮ ಸಕ್ರಮದ ಅಡಿಯಲ್ಲಿ 24 ಸಾವಿರ ರೂ. ತುಂಬಿದರೆ ಅರ್ಧ ಕಿ.ಮೀ. ವರೆಗೆ ವಿದ್ಯುತ್ ಕಲ್ಪಿಸಲು ಕಂಬಗಳು, ತಂತಿ, ಟಿಸಿ, ಹಾಗೂ ಅದಕ್ಕೆ ತಗಲುವಂತಹ ವೆಚ್ಛವನ್ನು ಭರಿಸಿ ರೈತರಿಗೆ ಸರ್ಕಾರವೇ ವಿದ್ಯುತ್ ನೀಡುತ್ತಿತ್ತು. ಆದರೆ, ಈಗ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಗೆ ಎಳ್ಳು ನೀರು ಬಿಟ್ಟ ಪರಿಣಾಮ ರೈತರು ತಮ್ಮ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲು 20 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.