ಬಾಗಲಕೋಟೆ : ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ ಎಂದು ಅಬಕಾರಿ ಸಚಿವ ಆರ್.
ಬಿ ತಿಮ್ಮಾಪೂರ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಟೀಲ್ ಸಾಹೇಬರೆ ಬರೀ ಮಾತನಾಡುವುದು, ಗಲ್ಲಿ ಗಲ್ಲಿ ಸಂಚಾರ ಮಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ ಹಣ ತೆಗೆದುಕೊಂಡು ಬನ್ನಿ ಎಂದು ತಿರುಗೇಟು ನೀಡಿದರು. ರಾಜ್ಯಕ್ಕೆ ಕೇಂದ್ರದಿಂದ ಕೊಡಬೇಕಿರುವ ಹಣವೇ ಬರುತ್ತಿಲ್ಲ. ಇನ್ನು ಹೆಚ್ಚಿನ ಹಣ ಏನು ಕೊಡುತ್ತಾರೆ. ಇವರಿಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.
ಇದೇ ಸಮಯದಲ್ಲಿ ಜನವರಿಯಲ್ಲಿ ಸರ್ಕಾರ ಬೀಳುತ್ತದೆ ಎಂಬ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಭದ್ರವಾಗಿದೆ. ಯಾವಾಗ ಕಾಂಗ್ರೆಸ್ ಸರ್ಕಾರ ಬಂದಿದೆ, ಆಗ ಐದು ವರ್ಷ ಸರ್ಕಾರ ನಡೆದಿದೆ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಸರ್ಕಾರ ಬಿದ್ದಿಲ್ಲ, ಬೀಳುವುದು ಇಲ್ಲ. ಬಿಜೆಪಿಯಲ್ಲಿ ಮಾತ್ರ ಕಚ್ಚಾಟ ಇರೋದು ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿಯೇ ಆಪರೇಷನ್ ಆಗುತ್ತೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಇದು ಎಲ್ಲಾ ಊಹಾಪೋಹ. ಏನೂ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ನಡೆಯುತ್ತದೆ. ಅವರ ಪಕ್ಷದ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರನ್ನೇ ಜೈಲಿಗೆ ಕಳಿಸಿದ್ದರು ಎಂದು ಟೀಕಿಸಿದರು.