ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂದು ರಾಜಧಾನಿ ಮುಂಬೈನಲ್ಲಿ ಸರ್ವಪಕ್ಷ ಸಭೆ ನಡೆಸಿದೆ. ಮರಾಠ ಮೀಸಲಾತಿ ನೀಡಲು ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಭೆ ಬಳಿಕ ತಿಳಿಸಿದ್ದಾರೆ.
ಸರ್ವಪಕ್ಷ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷ ಸಭೆಯಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅದು ಕೂಡ, ಇತರ ಸಮುದಾಯಗಳಿಗೆ ಅನ್ಯಾಯವಾಗದಂತೆ ಕಾನೂನಿನ ಚೌಕಟ್ಟಿನೊಳಗೆ ಮೀಸಲಾತಿ ನೀಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮೀಸಲಾತಿ ಕಲ್ಪಿಸುವಲ್ಲಿ ಸರ್ಕಾರದ ಪ್ರಯತ್ನದಲ್ಲಿ ನಂಬಿಕೆ ಇಡುವಂತೆ ನಾನು ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರಿಗೆ ಮನವಿ ಮಾಡುತ್ತೇನೆ. ಈ ಪ್ರತಿಭಟನೆಯು ಹೊಸ ದಿಕ್ಕನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಸಮರ್ಥನೀಯವಲ್ಲ. ಇವು ಚಳವಳಿಗೆ ಅಪಖ್ಯಾತಿ ತರುತ್ತಿವೆ. ಇಂತಹ ಘಟನೆಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ ಎಂದರು.
ಜನಸಾಮಾನ್ಯರಿಗೆ ಅಭದ್ರತೆ ಕಲ್ಪನೆ ಮೂಡಬಾರದು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಶಾಂತಿ ಕಾಪಾಡಲು ಮತ್ತು ರಾಜ್ಯ ಸರ್ಕಾರದೊಂದಿಗೆ ಸಹಕರಿಸಲು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಮೀಸಲಾತಿಗಾಗಿ ಸಮಯ ನೀಡಬೇಕು. ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ಕೂಡ ಇದೇ ನಿರ್ಧಾರಕ್ಕೆ ಬಂದಿದ್ದೇವೆ. ಯಾವುದೇ ಅಹಿತಕರ ಘಟನೆಗಳ ಬಗ್ಗೆ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಶಿಂಧೆ ವಿವರಿಸಿದರು.