ದಾವಣಗೆರೆ: “ಬಿಜೆಪಿಯವರು ಮೊದಲಿನಿಂದಲೂ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಅವರಿಗಿದು ಹೊಸತಲ್ಲ. ಈ ಹಿಂದೆ 17 ಜನ ಶಾಸಕರನ್ನು ಆಪರೇಷನ್ ಮಾಡಿದ್ದರು. ಈಗ 40 ಶಾಸಕರನ್ನು ಆಪರೇಷನ್ ಕಮಲ ಮಾಡಲಾಗದು. ಅವರದ್ದು ತಿರುಕನ ಕನಸು” ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವ್ಯಂಗ್ಯವಾಡಿದರು. ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಅವರ ಅನಿಸಿಕೆ ಹೇಳಿದ್ದಾರೆ. ನಮ್ಮ ಕಾಂಗ್ರೆಸ್ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ” ಎಂದರು.
ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆ ಎಂಬ ಬಗ್ಗೆ ಮಾತನಾಡುತ್ತಾ, “ಇದೆಲ್ಲ ಹೈಕಮಾಂಡ್ಗೆ ಬಿಟ್ಟಿದ್ದು. ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಸ್ಕೀಂಗಳನ್ನು ತಂದು, ಉತ್ತಮ ಆಡಳಿತ ನೀಡುತ್ತಿದ್ದಾರೆ. ಕೆಲವು ಶಾಸಕರು ಅವರ ನಾಯಕ ಸಿಎಂ ಆಗಲಿದೆ ಎಂದು ಹೇಳುತ್ತಾರೆ, ಅದರಲ್ಲಿ ತಪ್ಪೇನಿಲ್ಲ” ಎಂದು ಹೇಳಿದರು.
“ಕಾಂಗ್ರೆಸ್ನಲ್ಲಿ ಯಾವುದೇ ಬಣ ಇಲ್ಲ. ಸಚಿವ ಸತೀಶ್ ಜಾರಕಿಹೊಳಿ ತಮ್ಮ ಜಿಲ್ಲೆಯ ಶಾಸಕರ ಜೊತೆ ದಸರಾ ನೋಡಲು ಹೊರಟಿದ್ದರು. ಅದರಲ್ಲಿ ತಪ್ಪೇನಿದೆ ಎಂದ ಅವರು, ಲೋಕಾಸಭಾ ಚುನಾವಣೆ ಬಗ್ಗೆ ಮಾತನಾಡಿ, ಇನ್ನೂ ಸಮಯವಿದೆ, ಆಮೇಲೆ ನೋಡೋಣ” ಎಂದರು.