ವಿಜಯಪುರ: ಎರಡೂವರೆ ವರ್ಷದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಶಾಸಕ ರವಿ ಗಣಿಗ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.
ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಯಾರು ಯಾವ ಹೇಳಿಕೆಯನ್ನು ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಯಾವ ಹೇಳಿಕೆಯನ್ನು ನಾನು ನೀಡುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಯಾವ ಗೊಂದಲವೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವೊಂದು ವಿಚಾರ ಪ್ರಸ್ತಾಪವಾಗಿವೆಯೇ ಹೊರತು ಅದು ಗೊಂದಲವಲ್ಲ. ಅದು ಅವರವರ ಅಭಿಪ್ರಾಯ ಆಗಿರಬಹುದಷ್ಟೇ ಎಂದರು.
ವಾಲ್ಮೀಕಿ ಸಮಾಜದ ಮುಖಂಡರಿಗೆ ಸರ್ಕಾರ ಚೇಂಜ್ ಮಾಡುವ ಶಕ್ತಿಯಿದೆ ಎನ್ನುವ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈ ರೀತಿ ಏಕೆ ಹೇಳಿದರೂ ಎಂಬುದು ಅವರನ್ನೇ ಕೇಳಬೇಕು. ಅವರ ಹೇಳಿಕೆ ಬಿಟ್ಟು ಬೇರೆ ಕೇಳಿ ಎಂದರು. ದುಬೈ ಟೂರ್ ವಿಚಾರವಾಗಿಯೂ ಮಾತನಾಡಿ, ಇದು ಒಂದು ಖಾಸಗಿ ಕಾರ್ಯಕ್ರಮ. ಶಾಸಕರು ಇದರಲ್ಲಿ ಯಾರೂ ಪಾಲ್ಗೊಳ್ಳುತ್ತಿಲ್ಲ. ತಾವು ಮಾತ್ರ ತೆರಳುತ್ತಿರುವುದಾಗಿ ಹೇಳಿದರು.