Breaking News

ವಿದ್ಯುತ್, ಕಲ್ಲಿದ್ದಲು ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ಸಚಿವ ಕೆ.ಜೆ.ಜಾರ್ಜ್

Spread the love

ನವದೆಹಲಿ/ಬೆಂಗಳೂರು: ವಿದ್ಯುತ್ ಹಾಗೂ ಕಲ್ಲಿದ್ದಲು ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಿಯಮದ ಪ್ರಕಾರ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಬಗ್ಗೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಜ್ಯ ಸರ್ಕಾರ ತಳ್ಳಿ ಹಾಕುತ್ತದೆ ಎಂದರು.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದಕ್ಕೆ ಅನುಗುಣವಾಗಿ ಅಗತ್ಯ ವಿದ್ಯುತ್ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ವಿದ್ಯುತ್ ಬೇಡಿಕೆ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂದರೆ, ಆಗಸ್ಟ್‌ ತಿಂಗಳ ವಿದ್ಯುತ್ ಬಳಕೆ ಬೇಸಿಗೆ ಕಾಲದಲ್ಲಿನ ಬಳಕೆಯನ್ನು ಮೀರಿಸಿದೆ. ಈ ಅಕ್ಟೋಬರ್‌ನಲ್ಲೇ 15,000 ಮೆ.ವ್ಯಾ.ಗಿಂತ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಒದಗಿಸುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಪ್ರಯತ್ನ ಮಾಡಿದ್ದು, ಅದರಂತೆ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ವಿದ್ಯುತ್ ಬಳಕೆ ಏರಿಕೆ: ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ತಿಂಗಳಿಗೆ 200 ಮಿಲಿಯನ್ ಯೂನಿಟ್‌ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅತ್ಯಧಿಕ ಅಂದರೆ 11,268 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. 2022ರ ಆಗಸ್ಟ್‌ನಲ್ಲಿ ಗರಿಷ್ಠ ಬಳಕೆ 208 ಮಿಲಿಯನ್ ಯೂನಿಟ್‌ನಷ್ಟಿದ್ದರೆ, ಈ ವರ್ಷ ಆಗಸ್ಟ್‌ನ ಗರಿಷ್ಠ ಬಳಕೆ 294 ಮಿಲಿಯನ್ ಯೂನಿಟ್‌ಗೆ ಏರಿಕೆಯಾಗಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ, ನೀರಾವರಿ ಉದ್ದೇಶಗಳಿಗಾಗಿ ರೈತರಿಗೆ 5 ಗಂಟೆಗಳ ನಿರಂತರ ವಿದ್ಯುತ್ ಪೂರೈಸಲು ಇಂಧನ ಸಚಿವಾಲಯ ಹಗಲು-ರಾತ್ರಿ ಕೆಲಸ ಮಾಡುತ್ತಿದೆ.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಬೆಳೆ ಮಾದರಿ ಮತ್ತು ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಬ್ಬು ಮತ್ತು ಭತ್ತ ಬೆಳೆಯುವ ಭಾಗಗಳಲ್ಲಿ 7 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಗೆ ಚೀಫ್‌ ಎಂಜಿನಿಯರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ರಾಜ್ಯದ ಲೋಡ್‌ ಡಿಸ್ಪ್ಯಾಚ್ ಸೆಂಟರ್ (ಎಸ್‌ಎಲ್‌ಡಿಸಿ) ಪರಿಸ್ಥಿತಿ ಮೇಲೂ ನಿಗಾ ಇರಿಸಿದ್ದಾರೆ ಎಂದು ಸಚಿವ ಜಾರ್ಜ್ ವಿವರಿಸಿದರು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ