ಮಂಗಳೂರು: ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಮಂಗಳೂರಿನಲ್ಲಿ ಇಂದು ನಡೆದಿದೆ.
ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದಾರೆ. ಸುರತ್ಕಲ್ನ ಕಾನ ಬಾಳದ ರೂಪಶ್ರೀ (23) ಸಾವನ್ನಪ್ಪಿದವರು. ಸ್ವಾತಿ, ಹಿತ್ನವಿ, ಕೃತಿಕಾ, ಯತಿಕಾ ಗಾಯಗೊಂಡಿದ್ದಾರೆ.
ಸಂಜೆ 4 ಗಂಟೆಯ ಸುಮಾರಿಗೆ ಐವರು ಯುವತಿಯರು ಮಂಗಳೂರು ಕಾರ್ಪೊರೇಷನ್ ಈಜುಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಎಸ್.ಎಲ್.ಶೆಟ್ ಜ್ಯುವೆಲರ್ಸ್ ಬಳಿಯ ಫುಟ್‌ಪಾತ್ ಬಳಸಿ ಸಂಚರಿಸುತ್ತಿದ್ದಾಗ ಹಿಂದಿನಿಂದ ಫುಟ್‌ಪಾತ್ ಮೇಲೇರಿ ಬಂದ ಕಾರು ಡಿಕ್ಕಿ ಹೊಡೆದಿದೆ. ಹೋಂಡಾ ಇಯಾನ್ ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಮಣ್ಣಗುಡ್ಡ ಜಂಕ್ಷನ್‌ನಿಂದ ಲೇಡಿಹಿಲ್ ಕಡೆಗೆ ತೆರಳುತ್ತಿದ್ದ. ಅಜಾಗರೂಕತೆಯ ಚಾಲನೆಯಿಂದ ಕಾರನ್ನು ಫುಟ್‌ಪಾತ್ ಮೇಲೆ ಚಲಾಯಿಸಿದ್ದಾನೆ. ಘಟನೆಯ ನಂತರ ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದ.
ನಂತರ ಕಾರನ್ನು ಹೋಂಡಾ ಶೋರೂಂ ಮುಂದೆ ನಿಲ್ಲಿಸಿ, ಮನೆಗೆ ತೆರಳಿ ತಂದೆಯೊಂದಿಗೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.