ರಾಯಚೂರು: ಪವರ್‌ಸ್ಟಾರ್ ದಿ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ವಿವಿಧ ರೀತಿಯಲ್ಲಿ ವಿಶೇಷ ಪ್ರೀತಿ ತೋರಿರುವುದನ್ನು ಕಂಡಿದ್ದೇವೆ.
ಇಲ್ಲೊಬ್ಬ ರೈತ ಅಪ್ಪುವಿನ ಅಪ್ಪಟ ಅಭಿಯಾನಿಯಾಗಿದ್ದು, ಭತ್ತದ ಬೆಳೆಯಲ್ಲೇ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಸಿರವಾರ ತಾಲೂಕಿನ ಡೊಣ್ಣಿ ಕ್ಯಾಂಪ್‌ನ ರೈತ ಸತ್ಯನಾರಾಯಣ, ತಮ್ಮ ಭತ್ತದ ಬೆಳೆಯಲ್ಲೇ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಮೂಡಿಸುವ ಮೂಲಕ 2ನೇ ವರ್ಷ ಪುಣ್ಯಸ್ಮರಣೆಗೆ ವಿಭಿನ್ನವಾಗಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಎರಡು ಎಕರೆ ಜಮೀನಿನಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ತಕ್ಕಂತೆ ಭತ್ತ ಬೆಳೆದಿರುವ ವಿಡಿಯೋ ವೈರಲ್ ಆಗಿದೆ. ಸತ್ಯನಾರಾಯಣರಿಗೆ ಅಂಗವೈಕಲ್ಯತೆ ಇದ್ದು, ಇಂಥ ಕಾರ್ಯ ಮಾಡಿರುವುದಕ್ಕೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಸತ್ಯನಾರಾಯಣ ಅವರು ಜಪಾನ್ ತಂತ್ರಜ್ಞಾನ ಪದ್ದತಿಯಲ್ಲಿ ವಿವಿಧ ತಳಿಯ ಭತ್ತ ಬೆಳೆಯುತ್ತಿದ್ದಾರೆ. ಕರ್ನಾಟಕ ಪಕ್ಕದ ತೆಲಂಗಾಣ, ದೂರದ ಗುಜರಾತ್ ರಾಜ್ಯಗಳಿಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಎಂಬ ಹೆಸರಿನ 100 ಕೆ.ಜಿ ಭತ್ತದ ಬೀಜದ ತಳಿಗಳನ್ನು ಇವರು ನೆಟ್ಟಿದ್ದಾರೆ. ಸಾವಯವ ಪದ್ಧತಿ ರೂಢಿಸಿಕೊಂಡಿದ್ದಾರೆ.
ರಾಜ್ಯವನ್ನು ಬರಗಾಲ ಆವರಿಸಿದೆ. ಪ್ರಸ್ತುತ ದಿನಗಳಲ್ಲಿ ವ್ಯವಸಾಯಕ್ಕೆ ಬೇಕಾಗುವಷ್ಟು ನೀರು ರೈತನಿಗೆ ದೊರಕುತ್ತಿಲ್ಲ. ಆದರೆ, ಸತ್ಯನಾರಾಯಣ ಟ್ಯಾಂಕರ್ ಅಥವಾ ಬೋರ್‌ವೆಲ್ ಮೂಲಕ ಗದ್ದೆಗೆ ನೀರು ಹಾಯಿಸಲು ಅಂದಾಜು 3 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆಂತೆ. 90 ದಿನದಲ್ಲಿ ಬೆಳೆಯುವ ಭತ್ತದಲ್ಲಿ ಅಪ್ಪುವಿನ ಚಿತ್ರ ಸುಂದರವಾಗಿ ರೂಪುಗೊಂಡಿದೆ. ಕರ್ನಾಟಕ ರತ್ನ ಎನ್ನುವ ಪ್ರತಿ ಅಕ್ಷರವನ್ನು 40 ಅಡಿಯೊಳಗೆ ಬಿಡಿಸಿದ್ದಾರೆ.