ಬೆಂಗಳೂರು : ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ನಿನ್ನೆ ಸಂಜೆ ದುಷ್ಕರ್ಮಿಗಳು ಹಳೇ ದ್ವೇಷದ ಶಂಕೆ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಬಾಣಸವಾಡಿ ನಿವಾಸಿ ಮದನ್ (32) ಮೃತ ವ್ಯಕ್ತಿ. ಕೃತ್ಯವೆಸಗಿದ ಐದಾರು ಮಂದಿ ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ತಮಿಳುನಾಡಿನ ಚೆನ್ನೈ ಮೂಲದ ಮದನ್, ಈ ಮೊದಲು ಬೆಂಗಳೂರಿನಲ್ಲಿಯೇ ವಾಸವಾಗಿದ್ದ. ನಾಲ್ಕು ವರ್ಷಗಳ ಹಿಂದೆ ಚೆನ್ನೈಗೆ ಹೋಗಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ತಿಂಗಳ ಹಿಂದೆ ಮತ್ತೆ ಬೆಂಗಳೂರಿಗೆ ಬಂದಿದ್ದು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಇತ್ತೀಚೆಗೆ ಮೃತ ಮದನ್, ಹೃತಿಕ್ ಎಂಬಾತನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ಅದೇ ದ್ವೇಷಕ್ಕೆ ಹತ್ಯೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಟಿಂಗ್ ಶಾಪ್‌ಗೆ ಹೋಗುವಾಗ ಹತ್ಯೆ : ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮದನ್ ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಕಟಿಂಗ್ ಶಾಪ್‌ಗೆ ಹೋಗುತ್ತಿದ್ದ. ಈ ವೇಳೆ, ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮದನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕೈ, ಕಾಲು ಸೇರಿ ದೇಹದ ವಿವಿಧ ಭಾಗಗಳಿಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿತ್ತು. ಬಳಿಕ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನದಲ್ಲಿ ವ್ಯಕ್ತಿ ಮೇಲೆ ಹಲ್ಲೆ : ಕಳೆದ ಅಕ್ಟೋಬರ್ 7 ರ ರಾತ್ರಿ ಬಸ್ ನಿಲ್ದಾಣದಿಂದ ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿ ಮೊಬೈಲ್ ಮತ್ತು ಆತನ ಬಳಿಯಿದ್ದ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಇರುವ ರೈಲ್ವೆ ಬ್ರಿಡ್ಜ್ ಸಮೀಪ ನಡೆದಿತ್ತು. ಮಹದೇವ್ (54) ಹಲ್ಲೆಗೊಳಗಾದ ವ್ಯಕ್ತಿ. ಇವರು ಮೂಲತಃ ಕೊಡಗಿನವರು. ದೂರದ ಊರಿಗೆ ಹೋಗಿದ್ದ ಅವರು ಬರುವಾಗ ಸ್ವಲ್ಪ ತಡವಾಗಿತ್ತು. ಯುಗಾದಿ ಬಸ್ ನಿಲ್ದಾಣದ ಮೂಲಕ ಮನೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ರೈಲ್ವೆ ಗೇಟ್ ಸಮೀಪ ದುಷ್ಕರ್ಮಿಯೊಬ್ಬ ಮಹದೇವ್ಗೆ ಮಾರಕಾಸ್ತ್ರ ತೋರಿಸಿ, ಮೊಬೈಲ್ ಹಾಗೂ ನಗದು ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹದೇವ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.