ಧಾರವಾಡ: ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರದ್ದು ನಾಳೆ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಈಗಾಗಲೇ ಭರದ ಸಿದ್ಧತೆ ನಡೆಸುತ್ತಿದ್ದಾರೆ.
ಹೌದು. ನಾಳೆ ವಿನಯ್ ಕುಲಕರ್ಣಿ ಅವರ 55ನೇ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಧಾರವಾಡದ ಎಲ್ಲ ಕಡೆ ಶುಭಾಶಯ ಕೋರಿ ಬ್ಯಾನರ್ ಗಳನ್ನು ಹಾಕಿದ್ದಾರೆ. ಅಲ್ಲದೆ ಮುಖವಾಡ ಗಳನ್ನು ಕೂಡ ತಯಾರಿಸಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಯವರು ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮಧ್ಯೆ ತಮ್ಮ ಫೇಸ್ ನುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, ಬಿದ್ದು, ಎದ್ದು, ಗೆದ್ದು ಬರುವೆನು. ಸತ್ಯದ ತಳಹದಿಯಿಂದ ಎದ್ದು, ಗೆದ್ದು ಬರುವೆನು. ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ. ಆದರೆ ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೆ ಹೋಗುತ್ತದೆ. ಸತ್ಯಕ್ಕೆ ಸೋಲಿಲ್ಲ, ನನ್ನೆಲ್ಲಾ ಪ್ರೀತಿ ಪಾತ್ರರಿಗೆ ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಚಿರಋಣಿ, ನಿಮ್ಮೆಲ್ಲರ ಹಾರೈಕೆ ಹಾಗೂ ನಂಬಿಕೆ ಎಂದೂ ಸುಳ್ಳಾಗುವುದಿಲ್ಲ. ಇಂತಿ ನಿಮ್ಮ ವಿನಯ ಕುಲಕರ್ಣಿ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಸಾಮಾಜಿಕ ಜಾಲತಾಣಗಳ ಪೋಸ್ಟ್ ಫೋಟೋ ಹಾಕಿ ವಿನಯ್ ಕುಲಕರ್ಣಿ ಸಾಲುಗಳನ್ನು ಬರೆದಿದ್ದಾರೆ.
Laxmi News 24×7