Breaking News

ಬಳ್ಳಾರಿ : ಸಂಡೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಸಮೀಕ್ಷೆ ನಡೆಸಿದ ಕೇಂದ್ರ ತಂಡ

Spread the love

ಬಳ್ಳಾರಿ : ಜಿಲ್ಲೆಯಲ್ಲಿ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ, ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ.

ರಾಜಶೇಖರ್ (ಐ.ಎ.ಎಸ್) ನೇತೃತ್ವದ ಮೂವರು ಅಧಿಕಾರಿಗಳನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡವು ಶನಿವಾರ ಸಂಡೂರು ತಾಲೂಕಿನ ಕೆಲ ಗ್ರಾಮ ವ್ಯಾಪ್ತಿಯ ಕೃಷಿ ಭೂಮಿಗಳಿಗೆ ಭೇಟಿ ನೀಡಿ ಬರ ಸಮೀಕ್ಷೆ ನಡೆಸಿತು.

ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ. ರಾಜಶೇಖರ್ ಐ.ಎ.ಎಸ್ ನೇತೃತ್ವದಲ್ಲಿ ಪಶುಸಂಗೋಪನೆ ಇಲಾಖೆಯ ನಿರ್ದೇಶಕರಾದ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾದ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ (ಐ.ಎ.ಎಸ್) ಅವರನ್ನು ಒಳಗೊಂಡ ಅಧಿಕಾರಿಗಳ ತಂಡವು ನಿಗದಿಪಡಿಸಿದಂತೆ ಸಂಡೂರು ತಾಲೂಕಿನ ಸೋವೆನಹಳ್ಳಿ ಗ್ರಾಮದ ಕೃಷಿ ಪ್ರದೇಶಕ್ಕೆ ಭೇಟಿ ನೀಡಿ ಬರ ಅಧ್ಯಯನ ಸಮೀಕ್ಷೆ ನಡೆಸಿ ಮಾಹಿತಿ ಪಡೆದುಕೊಂಡಿತು.

ಕೇಂದ್ರ ತಂಡದಿಂದ ಬರ ಅಧ್ಯಯನ : ಬಳಿಕ ಬಂಡ್ರಿ ಗ್ರಾಮ ವ್ಯಾಪ್ತಿಯ ಗೊಲ್ಲರಹಟ್ಟಿಯ ರೈತ ತಿಮ್ಮಪ್ಪ ಎಂಬವರ ಮೆಕ್ಕೆಜೋಳ ಹೊಲಕ್ಕೆ ಭೇಟಿ ನೀಡಿತು. “ಸಾವಿರಾರು ರೂಪಾಯಿ ರೊಕ್ಕ ಹಾಕಿ, ಸಾಲ- ಸೂಲ ಮಾಡಿ ಬಿತ್ತಿನಿ, ಮಳೆ ಇಲ್ಲದೆ ಬೆಳೆ ಇಲ್ಲದೇ, ಗುಳೇ ಹೋಗೋ ಪರಿಸ್ಥಿತಿ ಬಂದಿದೆ” ಎಂದು ಕೇಂದ್ರ ತಂಡದ ಮುಂದೆ ರೈತ ತಿಮ್ಮಪ್ಪ ತಮ್ಮ ಅಳಲು ತೋಡಿಕೊಂಡರು.

ಈ ವೇಳೆ ಕೇಂದ್ರ ತಂಡದ ಅಧಿಕಾರಿಯೊಬ್ಬರು, “ಹೋದ ವರ್ಷ ಏನು ಬಿತ್ತನೆ ಮಾಡಿದ್ದಿರಿ, ಎಷ್ಟು ಖರ್ಚು ಮಾಡಿದ್ದಿರಿ, ಈಗ ಬೆಳೆ ಹಾಳಾಗಿದ್ದರಿಂದ ಜೀವನ ಹೇಗೆ ನಡೆಸ್ತಿರಿ? ನಿಮಗೆ ಎಷ್ಟು ಜನ ಮಕ್ಕಳು? ಬೆಳೆ ವಿಮೆ ಮಾಡಿಸಿದ್ದೀರಾ? ನರೇಗಾದ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಡ್ ಹೊಂದಿದ್ದೀರಾ?” ಎಂದು ರೈತನಲ್ಲಿ ವಿವಿಧ ಮಾಹಿತಿ ಕೇಳಿದರು. ಬಳಿಕ ಅಲ್ಲಿಯೇ ಇನ್ನೊಬ್ಬ ರೈತನ ರಾಗಿ ಬೆಳೆದ ಜಮೀನಿಗೆ ಭೇಟಿ ನೀಡಿ, ಹಸಿರಾಗಿ ಕಂಡರೂ ಇಳುವರಿಯಲ್ಲಿ ಭಾರಿ ಕುಸಿತ ಆಗಿರುವುದನ್ನು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಗಮನಕ್ಕೆ ತರಲಾಯಿತು.

ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮನೆಗೆ ಭೇಟಿ : ನಂತರದಲ್ಲಿ ಸಂಡೂರು ತಾಲೂಕಿನ ಶ್ರೀರಾಮ ಶೆಟ್ಟಿ ಹಳ್ಳಿಯಲ್ಲಿ ಸೆ.15ರಂದು ರೈತ ಭಂಗಿ ಕಾಂತಪ್ಪ ಎಂಬವರು ಸಾಲ ಮಾಡಿ ಬೋರ್​ವೆಲ್​ ಕೊರೆಸಿದ್ದರು. ಆದರೆ ಬೋರ್​ವೆಲ್​ನಲ್ಲಿ ನೀರು ಸಿಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ರೈತ ಭಂಗಿ ಕಾಂತಪ್ಪನ ಮನೆಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡವು ಕುಟುಂಬಸ್ಥರಿಗೆ ಧೈರ್ಯ ತುಂಬಿತು. ಈ ವೇಳೆ ಪರಿಹಾರಕ್ಕೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ, ನಿಮ್ಮ ಜೊತೆಗೆ ಸರ್ಕಾರ ಇದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರೈತರು ಯಾರೂ ಧೃತಿಗೆಡಬಾರದು, ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ತಂಡವು ಮನವರಿಕೆ ಮಾಡಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಬರ ಅಧ್ಯಯನ ತಂಡದ ಅಧಿಕಾರಿಗಳೊಂದಿಗೆ ಖುದ್ದು ಹಾಜರಿದ್ದು, ಸಂಡೂರು ತಾಲೂಕಿನ ವಿವಿಧೆಡೆ ಸಂಚರಿಸಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕ್ಷೇತ್ರ ಭೇಟಿಗೂ ಮುನ್ನ ಕೂಡ್ಲಿಗಿಯ ಅತಿಥಿ ಗೃಹದಲ್ಲಿ ಜಿಲ್ಲೆಯ ಬರದ ವಸ್ತು ಸ್ಥಿತಿ ಬಗ್ಗೆ ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ರೈತರು, ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ