Breaking News

ಬಳ್ಳಾರಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ 2,643 ಎಕರೆ ಭೂಮಿ ಹಿಂದಿರುಗಿಸಲು ಅರ್ಸೆಲರ್​ ಮಿತ್ತಲ್​ ನಿರ್ಧಾರ

Spread the love

ನವದೆಹಲಿ: ಕರ್ನಾಟಕದ ಬಳ್ಳಾರಿಯಲ್ಲಿ ಉಕ್ಕಿನ ಸ್ಥಾವರ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡಿದ್ದ 2,643 ಎಕರೆ ಭೂಮಿಯನ್ನು ಹಿಂದಿರುಗಿಸಲು ನಿರ್ಧರಿಸಿರುವುದಾಗಿ ವಿಶ್ವದ ಅತಿದೊಡ್ಡ ಉಕ್ಕು ಉತ್ಪಾದಕ ಅರ್ಸೆಲರ್​ ಮಿತ್ತಲ್​ ಕಂಪನಿಯು ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

ಈಗಾಗಲೇ ಪಾವತಿಸಿರುವ 267 ಕೋಟಿ ರೂಪಾಯಿ ಮೊತ್ತವನ್ನೂ ಕೂಡ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ತಿಳಿಸಿದೆ.

ಈ ಪ್ರಕರಣವು ನ್ಯಾಯಮೂರ್ತಿಗಳಾದ ಸಂಜಯ್​ ಕಿಶನ್​ ಕೌಲ್​ ಮತ್ತು ಸುಧಾಂಶು ಧುಲಿಯಾ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು. ಅರ್ಸೆಲರ್​ ಮಿತ್ತಲ್​ ಕಂಪನಿಯನ್ನು ಪ್ರತಿನಿಧಿಸಿದ ವಕೀಲರು, “ಬದಲಾದ ಸನ್ನಿವೇಶದಲ್ಲಿ ಅರ್ಜಿದಾರರು ಭೂಮಿಯನ್ನು ಇಟ್ಟುಕೊಳ್ಳಲು ಬಯಸುವುದಿಲ್ಲ ಮತ್ತು 2,643 ಎಕರೆಗಳ ಸಂಪೂರ್ಣ ಭೂಮಿಯನ್ನು ಹಿಂದಿರುಗಿಸುತ್ತಾರೆ. ಈಗಾಗಲೇ ಪಾವತಿಸಿರುವ 267 ಕೋಟಿ ರೂಪಾಯಿಗಳನ್ನು ಕೂಡ ಕೆಐಎಡಿಬಿ ಮುಟ್ಟುಗೋಲು ಹಾಕಿಕೊಳ್ಳಬಹುದು” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಸೆಲರ್​ ಮಿತ್ತಲ್​ ಕಂಪನಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಪೀಠ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ನೋಟಿಸ್​ ಜಾರಿ ಮಾಡಿತು. ವಿಚಾರಣೆ ವೇಳೆ ನ್ಯಾಯಪೀಠ, ಪರಿಹಾರದ ಬಗ್ಗೆ ರೈತರನ್ನು ಪ್ರತಿನಿಧಿಸುವ ವಕೀಲರ ಕಾಳಜಿಯನ್ನು ಗಮನಿಸಿತು. “ಭೂಮಾಲೀಕರಿಗೆ ಪರಿಹಾರ ಪಾವತಿಸಿದ ನಂತರ ಅಥವಾ ಹಣವನ್ನು ಹಿಂದಿರುಗಿಸಿದ ಬಳಿಕ ಭೂಮಿಯನ್ನು ಉಳಿಸಿಕೊಳ್ಳುತ್ತದೆಯೇ?” ಎಂಬುದನ್ನು ಸ್ಪಷ್ಟಪಡಿಸುವಂತೆ ಮಂಡಳಿಗೆ ತಿಳಿಸಿತು.

 

ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಪರ ಹಾಜರಿದ್ದ ವಕೀಲರು, ಈ ವಿಚಾರವಾಗಿ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು. ವಿಚಾರಣೆಯನ್ನು ಅಕ್ಟೋಬರ್​ 30ಕ್ಕೆ ಮುಂದೂಡಲಾಯಿತು.

ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ 2010ರಲ್ಲಿ ಬಳ್ಳಾರಿಯಲ್ಲಿ ಉಕ್ಕಿನ ಸ್ಥಾವರ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಸುಮಾರು 300 ಎಕರೆ ಭೂಮಿಗೆ ಅಲ್ಲಿನ ಹೆಚ್ಚುವರಿ ಹಿರಿಯ ಸಿವಿಲ್​ ನ್ಯಾಯಾಲಯ ನಿಗದಿಪಡಿಸಿದಷ್ಟು ಪರಿಹಾರವನ್ನೇ ಅರ್ಸೆಲರ್​ ಮಿತ್ತಲ್​ ಕಂಪನಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್​ ಈ ವರ್ಷದ ಫೆಬ್ರವರಿಯಲ್ಲಿ ಆದೇಶಿಸಿತ್ತು. ಈ ಆದೇಶದ ಪ್ರಕಾರ, ಪ್ರತಿ ಎಕರೆಗೆ ಕಂಪನಿ 30 ಲಕ್ಷ ರೂಪಾಯಿಗೂ ಅಧಿಕ ಪರಿಹಾರ ಪಾವತಿಸಬೇಕಿತ್ತು.

ಬಳ್ಳಾರಿಯಲ್ಲಿ ಸ್ವಾಧೀನಪಡಿಸಿಕೊಂಡಿರುವ 4,865.64 ಎಕರೆ ಭೂಮಿಯಲ್ಲಿ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರಕ್ಕಾಗಿ ಅವರು ಸಲ್ಲಿಸಿದ ಮನವಿಯನ್ನು ಮರುಪರಿಶೀಲಿಸುವ ನಿರ್ಧಾರದ ವಿರುದ್ಧ ರೈತರ ಗುಂಪು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು


Spread the love

About Laxminews 24x7

Check Also

ಪತ್ರಕರ್ತರಿಗೆ ತರಬೇತಿ: ಇನ್‌ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌-ಕರ್ನಾಟಕ ಮಾಧ್ಯಮ ಅಕಾಡೆಮಿ ಒಡಂಬಡಿಕೆ

Spread the loveಬೆಂಗಳೂರು, (ಸೆಪ್ಟೆಂಬರ್‌ 8): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಮ್ಮುಖದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ