ಕಲಬುರಗಿ : ಬಿಸಿಲೂರು ಕಲಬುರಗಿಯಲ್ಲಿ ಮತ್ತೆ ನೆತ್ತರು ಹರಿದಿದೆ.
ಖ್ಯಾತ ಟೈಲರ್ ಉದ್ಯಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಮಕ್ತಂಪುರ ಬಡಾವಣೆಯಲ್ಲಿ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುರೇಶ್ ಹಂಚಿ (44) ಮೃತ ವ್ಯಕ್ತಿ. ಸೂಪರ್ ಮಾರ್ಕೆಟ್ ಪ್ರದೇಶದ ಪುಠಾಣಿ ಗಲ್ಲಿಯಲ್ಲಿ ಬಿಎಸ್ ಟೈಲರ್ ಹೆಸರಿನ ಅಂಗಡಿ ಹೊಂದಿದ್ದಾರೆ. ಟೈಲರಿಂಗ್ ವೃತ್ತಿಯಲ್ಲಿ ಹೆಸರು ಮಾಡಿದ್ದ ಸುರೇಶ್, ಹತ್ತಾರು ಜನರಿಗೆ ಕೆಲಸ ಕೊಟ್ಟು ಖ್ಯಾತ ಟೈಲರ್ ಅಂತಲೇ ಫೇಮಸ್ ಆಗಿದ್ರು. ನಗರದ ಮಕ್ತಾಂಪುರ ಬಡಾವಣೆಯಲ್ಲಿ ವಾಸವಿದ್ದ ಸುರೇಶ್, ಅದೇ ಬಡಾವಣೆಯ ಭವಾನಿ ಗುಡಿಯ ಹತ್ತಿರ ಬರ್ಬರವಾಗಿ ಕೊಲೆ ಆಗಿದ್ದಾರೆ. ಮಾಜಿ ಕೆಲಸಗಾರನಿಂದಲೇ ಸುರೇಶ್ ಹತ್ಯೆಗೊಳಗಾಗಿದ್ದಾರೆ.
ಹೌದು, ಸುರೇಶ್ ಅವರ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ ಹಿರೇಮಠ (20) ಎಂಬಾತ ಕೊಲೆ ಮಾಡಿರುವ ಆರೋಪಿ. ಮಗನ ಕಾಲೇಜ್ ಅಡ್ಮಿಷನ್ ಮಾಡಲು ಬೆಂಗಳೂರಿಗೆ ಹೋಗಿ ಬೆಳಗ್ಗೆಯಷ್ಟೇ ವಾಪಸ್ ಆಗಿದ್ದ ಸುರೇಶ್ ಎಂದಿನಂತೆ ಅಂಗಡಿಗೆ ಹೋಗಿ ಸಾಯಂಕಾಲ 6 ಗಂಟೆ ಸುಮಾರಿಗೆ ವಾಪಸ್ ಬಂದಿದ್ದಾರೆ. ಈ ವೇಳೆ ಅಡ್ಡಗಟ್ಟಿದ ದುಷ್ಕರ್ಮಿ, ಮೊದಲು ರಾಡ್ನಿಂದ ಟೈಲರ್ ತಲೆಗೆ ಬಲವಾಗಿ ಹೊಡೆದಿದ್ದು, ನೆಲಕ್ಕೆ ಬಿದ್ದ ಬಳಿಕ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ, ಮೃತರ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದ. ಇತ್ತ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ ಸುರೇಶ್ ಕೊನೆಯುಸಿರೆಳೆದಿದ್ದರು. ದುಷ್ಕರ್ಮಿಯ ಅಟ್ಟಹಾಸಕ್ಕೆ ಬಡಾವಣೆಯ ಜನರು ಬೆಚ್ಚಿಬಿದ್ದಿದ್ದಾರೆ.