ಕಛ್ (ಗುಜರಾತ್): ಕಚ್‌ನ ಸಮುದ್ರ ಗಡಿಯಲ್ಲಿ ಆಗಾಗ ಕಳ್ಳಸಾಗಾಣಿಕೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಜೊತೆಗೆ ಪಾಕಿಸ್ತಾನಿ ನುಸುಳುಕೋರರು ಮತ್ತು ಪಾಕಿಸ್ತಾನಿ ಮೀನುಗಾರರು ಕೂಡ ಆಗಾಗ ಭಾರತದ ಯೋಧರ ಬಳಿ ಸಿಕ್ಕಿ ಬೀಳುತ್ತಿದ್ದಾರೆ. ಪ್ರಸ್ತತ ಬಿಎಸ್‌ಎಫ್ ತಂಡವು ಭಾರತದ ಕಚ್-ಪಾಕಿಸ್ತಾನ ಜಲ ಗಡಿ ಬಳಿಯ ಸರ್ ಕ್ರೀಕ್ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಬಂಧಿತ ವ್ಯಕ್ತಿಯ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ, ಸರ್ ಕ್ರೀಕ್ ಬಳಿ ಇಂಜಿನ್ ಅಳವಡಿಸಿದ ಮರದ ದೋಣಿಯೊಂದಿಗೆ ಪಾಕಿಸ್ತಾನದ ಮೀನುಗಾರನನ್ನು ಅರೆಸ್ಟ್ ಮಾಡಿದ್ದಾರೆ.
ಪಾಕಿಸ್ತಾನಿ ಮೀನುಗಾರನನ್ನು ತನಿಖೆಗೊಳಪಡಿಸಿದ ಬಿಎಸ್‌ಎಫ್: ಬಂಧಿತ ಪಾಕಿಸ್ತಾನಿ ಮೀನುಗಾರನನ್ನು ಮೊಹಮ್ಮದ್ ಖಮೇಸಾ ಎಂದು ಗುರುತಿಸಲಾಗಿದೆ. ಈತನ ವಯಸ್ಸು 50 ವರ್ಷ. ಈ ವ್ಯಕ್ತಿ ಪಾಕಿಸ್ತಾನದ ಸಿಂಧ್‌ನ ಸುಜಾವಾಲ್ ಜಿಲ್ಲೆಯ ವಿಲ್ ಶಹಬಂದರ್ ನಿವಾಸಿ ಎಂದು ತಿಳಿದು ಬಂದಿದೆ. ಬಿಎಸ್‌ಎಫ್ ಸಿಬ್ಬಂದಿ ಪಾಕಿಸ್ತಾನದ ದೋಣಿ ಮತ್ತು ಪಾಕಿಸ್ತಾನಿ ಮೀನುಗಾರನ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆಯೂ ಪಾಕಿಸ್ತಾನಿ ವ್ಯಕ್ತಿಯೊಬ್ಬನ ಬಂಧನ: ವಾರದ ಹಿಂದೆ, ಪಕ್ಷಿಗಳ ಸಮೇತ ಭಾರತದ ಜಲಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದ 30 ವರ್ಷದ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಬಿಎಸ್‌ಎಫ್ ಯೋಧರು ಬಂಧನ ಮಾಡಿದ್ದರು. ಪಕ್ಷಿಗಳು ಮತ್ತು ಏಡಿಗಳನ್ನು ಹಿಡಿಯುವ ದುರಾಸೆಯಲ್ಲಿ ಕಚ್‌ನ ಕಡಲ ಗಡಿಯನ್ನು ಪ್ರವೇಶ ಮಾಡಿದ್ದನು. ಪಾಕಿಸ್ತಾನಿ ಮೀನುಗಾರರು ಮೀನುಗಾರಿಕೆಯ ದುರಾಸೆಯಿಂದ ಭಾರತದ ಗಡಿಯನ್ನು ಪ್ರವೇಶ ಮಾಡುತ್ತಿದ್ದಾರೆ. ಭಾರತ ಜಲ ಗಡಿಯಲ್ಲಿ ಪಾಕಿಸ್ತಾನಿ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡುವುದು ಹೆಚ್ಚಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಭಾರತದ ಗಡಿ ಪ್ರದೇಶಗಳಲ್ಲಿ ಬಿಎಸ್‌ಎಫ್ ಹದ್ದಿನ ಕಣ್ಣು ಇರಿಸಿದೆ.
ಅಕ್ರಮವಾಗಿ ದೇಶದೊಳಗೆ ಒಳನುಸುಳಲು ಯತ್ನಿಸಿದ್ದ ಪಾಕ್ ಉಗ್ರ ಗುಂಡೇಟಿಗೆ ಬಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಶಸ್ತ್ರಾಸ್ತ್ರ ಹಾಗೂ ಮಾದಕವಸ್ತು ಕಳ್ಳಸಾಗಣೆ ಎಗ್ಗಿಲ್ಲದೇ ನಡೆಯುತ್ತಿದೆ. ಜುಲೈ 24ರಂದು ಮಧ್ಯರಾತ್ರಿ ಪಾಕಿಸ್ತಾನದಿಂದ ಭಾರತದೊಳಕ್ಕೆ ನುಸುಳುತ್ತಿದ್ದ ಉಗ್ರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಬಿಎಸ್‌ಎಫ್ ಪಡೆಯು, ಉಗ್ರನಿಂದ 4 ಕೆಜಿ ಮಾದಕ ದ್ರವ್ಯವನ್ನು ವಶಕ್ಕೆ ಪಡೆದುಕೊಂಡಿತ್ತು.
ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾರ್ಯಾಚರಣೆ ನಡೆಸಿತ್ತು. ಪಾಕ್ ಉಗ್ರನ ಯತ್ನವನ್ನು ವಿಫಲಗೊಳಿಸಿತ್ತು. ಈ ಸಂದರ್ಭದಲ್ಲಿ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನುಸುಳುಕೋರನ ಬಳಿಯಿದ್ದ 4 ಕೆಜಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಬಿಎಸ್‌ಎಫ್ ಅಧಿಕಾರಿ ಮಾಹಿತಿ ನೀಡಿದ್ದರು.
Laxmi News 24×7