Breaking News

2000 ನೋಟುಗಳ ವಿನಿಮಯದ ಅವಧಿ ವಿಸ್ತರಿಸಿದ ಆರ್​ಬಿಐ: ಅಕ್ಟೋಬರ್​ 7 ಕೊನೆ ದಿನ

Spread the love

ನವದೆಹಲಿ: ಹಿಂಪಡೆಯಲಾಗಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ, ಠೇವಣಿ ಅವಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ಇನ್ನಷ್ಟು ಕಾಲ ವಿಸ್ತರಿಸಿದೆ.

ಇಂದೇ (ಸೆ.30)ಕೊನೆಯಾಗಿದ್ದ ಗಡುವನ್ನು ಅಕ್ಟೋಬರ್​ 7ರ ವರೆಗೆ ಕಾಲಾವಕಾಶ ನೀಡುವ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಆರ್​ಬಿಐ, ಬ್ಯಾಂಕ್​ ರಜೆಗಳಿಂದಾಗ ಅಡ್ಡಿ ಮತ್ತು ಜನರ ಅನುಕೂಲಕ್ಕಾಗಿ ಎರಡು ಸಾವಿರದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಇನ್ನೂ 7 ದಿನಗಳ ಕಾಲಾವಕಾಶ ನೀಡಲಾಗಿದೆ. ಗ್ರಾಹಕರು ಬ್ಯಾಂಕ್​ಗಳಿಗೆ ತೆರಳಿ ಅಥವಾ ನೋಟನ್ನು ಯಾವುದೇ ರೀತಿಯಲ್ಲಾದರೂ ವಿನಿಯೋಗಿಸಿ ಬದಲಿಸಿಕೊಳ್ಳಲು ಸೂಚಿಸಿದೆ. ಕಾಲಾವಧಿ ಮುಗಿದ ನಂತರ ಅದು ಮೌಲ್ಯ ಕಳೆದುಕೊಳ್ಳಲಿದೆ ಎಂದೂ ಹೇಳಿದೆ.

ಇನ್ನೂ ಯಾರ ಬಳಿಯಾದರೂ 2000 ರೂಪಾಯಿ ನೋಟುಗಳಿದ್ದರೆ, ಅಂಥವರು ಸಾಧ್ಯವಾದಷ್ಟು ಬೇಗ ಅವುಗಳನ್ನು ಹತ್ತಿರದ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬೇಕು ಅಥವಾ ಬದಲಾಯಿಸಬೇಕು. ಅಕ್ಟೋಬರ್ 8 ರ ನಂತರ ಈ ನೋಟುಗಳು ಅಮಾನ್ಯವಾಗಲಿವೆ. ಗಡುವು ತೀರಿದ ಬಳಿಕ ಬ್ಯಾಂಕ್​ಗಳು ಎರಡು ಸಾವಿರದ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲು ಅಥವಾ ಬದಲಾಯಿಸಿಕೊಳ್ಳಲು ಅವಕಾಶ ನೀಡುವುದಿಲ್ಲ.

ಗರಿಷ್ಠ 20 ಸಾವಿರ ವಿನಿಮಯ: ಜನರು ಆರ್​​ಬಿಐ ಸೂಚಿಸಿದ ಬ್ಯಾಂಕ್ ಶಾಖೆಗಳು ಮತ್ತು ಆರ್‌ಬಿಐನ ಪ್ರಾದೇಶಿಕ ಶಾಖೆಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಭಾರತೀಯ ಅಂಚೆ ಮೂಲಕವೂ ನೋಟುಗಳನ್ನು ಆಯಾ ಆರ್​ಬಿಐ ಕಚೇರಿಗಳಿಗೆ ಕಳುಹಿಸಬಹುದು. ಒಂದು ಬಾರಿಗೆ ಗರಿಷ್ಠ 20,000 ರೂ.ವರೆಗೆ ಮೊತ್ತವನ್ನು ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಸೆಪ್ಟೆಂಬರ್ 1 ರ ಹೊತ್ತಿಗೆ, ಸುಮಾರು 93 ಪ್ರತಿಶತದಷ್ಟು ನೋಟುಗಳು ಸಾರ್ವಜನಿಕರಿಂದ ಬ್ಯಾಂಕುಗಳು/ಆರ್‌ಬಿಐಗಳನ್ನು ತಲುಪಿವೆ. ಈ ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂಪಾಯಿ ಆಗಲಿದೆ. ಇನ್ನೂ 24 ಸಾವಿರ ಕೋಟಿ ಮೌಲ್ಯದ ನೋಟುಗಳು ವಾಪಸ್ ಬರಬೇಕಿದೆ. ವಾಪಸಾದ ನೋಟುಗಳಲ್ಲಿ ಶೇ.87ರಷ್ಟು ಠೇವಣಿ ರೂಪದಲ್ಲಿ ಮತ್ತು ಶೇ.13ರಷ್ಟು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿತ್ತು.

ಮೇ 19 ರಂದು, ಆರ್‌ಬಿಐ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿತು. ಆದರೆ, ಅದು ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತದೆ ಎಂದು ಹೇಳಿತ್ತು. ತಕ್ಷಣವೇ ಜಾರಿಗೆ ಬರುವಂತೆ ಇಂತಹ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿತ್ತು.

2000 ಮುಖಬೆಲೆಯ ನೋಟನ್ನು 2016 ರ ನವೆಂಬರ್​ನಲ್ಲಿ ದೇಶದಲ್ಲಿ ಚಲಾವಣೆಗೆ ಪರಿಚಯಿಸಲಾಯಿತು. ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ 500 ಮತ್ತು 1000 ಬ್ಯಾಂಕ್‌ನೋಟುಗಳ ವಹಿವಾಟನ್ನು ಹಿಂಪಡೆಯಲಾಗಿತ್ತು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ