ಬೆಂಗಳೂರು : ಕರ್ನಾಟಕ ಬಂದ್ ಹಿನ್ನೆಲೆ ವಿಧಾನಸೌಧದಲ್ಲಿ ಸರ್ಕಾರಿ ನೌಕರರ ಸಂಖ್ಯೆ ವಿರಳವಾಗಿದೆ. ಹೀಗಾಗಿ, ಬಂದ್ ಬಿಸಿ ಶಕ್ತಿಸೌಧಕ್ಕೂ ತಟ್ಟಿದ್ದು, ಸಚಿವಾಲಯದ ಹಲವು ಸಿಬ್ಬಂದಿ ಇಂದು ಕೆಲಸಕ್ಕೆ ಗೈರಾಗಿದ್ದಾರೆ. ವಾರದಲ್ಲಿ ಎರಡನೇ ಬಂದ್ ಇದಾಗಿದ್ದು, ವಿಧಾನಸೌಧದ ಕಾರಿಡಾರ್ಗಳು ಖಾಲಿ ಖಾಲಿ ಇವೆ.
ಕರ್ನಾಟಕ ಬಂದ್ ಹಿನ್ನೆಲೆ ಹಲವು ಸಿಬ್ಬಂದಿ ಕೆಲಸಕ್ಕೆ ಆಗಮಿಸಿಲ್ಲ. ನಿನ್ನೆ ಈದ್ ಮಿಲಾದ್ ಇದ್ದ ಕಾರಣ ಸರ್ಕಾರಿ ರಜೆ ಇದ್ದು, ಇಂದು ಬಂದ್ ಇರುವುದರಿಂದ ಸಚಿವಾಲಯದ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದಾರೆ. ಇನ್ನೊಂದೆಡೆ, ನಿನ್ನೆ ಸರ್ಕಾರಿ ರಜೆ, ಇಂದು ಕರ್ನಾಟಕ ಬಂದ್, ನಾಳೆ ಶನಿವಾರ ಒಂದು ದಿನ ರಜೆ ಹಾಕಿದರೆ ಭಾನುವಾರ ಹಾಗೂ ಸೋಮವಾರ ಗಾಂಧಿ ಜಯಂತಿ ಸೇರಿ ಐದು ದಿನ ರಜೆ ಇರುವುದರಿಂದ ಬಹುತೇಕರು ಊರಿಗೆ ತೆರಳಿದ್ದಾರೆ.
ಸಚಿವಾಲಯದ ಕಚೇರಿಗಳಲ್ಲಿ ಸುಮಾರು ಸೇ.50ಕ್ಕೂ ಅಧಿಕ ಸಿಬ್ಬಂದಿ ಗೈರಾಗಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯ ಕಾರಿಡಾರ್ ಬಿಕೋ ಎನ್ನುತ್ತಿದೆ. ಆವರಣದಲ್ಲಿ ವಾಹನಗಳ ಸಂಖ್ಯೆಯೂ ವಿರಳವಾಗಿದೆ. ಸಚಿವಾಲಯ ನೌಕರರ ಸಂಘ ಕರ್ನಾಟಕ ಬಂದ್ಗೆ ನೈತಿಕ ಬೆಂಬಲ ಸೂಚಿಸಿದೆ. ವಿಧಾನಸೌಧ, ವಿಕಾಸಸೌಧ ಹಾಗೂ ಎಂ.ಎಸ್.ಕಟ್ಟಡದಲ್ಲಿ ಸಿಬ್ಬಂದಿ ಸಂಖ್ಯೆ ಅತ್ಯಂತ ವಿರಳವಾಗಿದೆ.
ತಮಿಳುನಾಡಿಗೆ ನೀರು ಬಿಡುಗಡೆಯನ್ನು ವಿರೋಧಿಸಿ ರೈತ ಸಂಘಟನೆ ಸೇರಿ ಹಲವು ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿವೆ. ಬಂದ್ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ, ಬೆಂಗಳೂರು ಪೊಲೀಸ್ ಆಯುಕ್ತರು ನಗರದಲ್ಲಿ ಸೆಕ್ಷನ್ 144 ವಿಧಿಸಿದ ಕಾರಣ ಯಾವುದೇ ಮೆರವಣಿಗೆಗಳಿಗೆ ಅವಕಾಶ ಇಲ್ಲ.
ಬೆಂಗಳೂರಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸೇವೆ ಎಂದಿನಂತಿದ್ದು, ಆಟೋ, ಖಾಸಗಿ ವಾಹನಗಳ ಓಡಾಡುತ್ತಿವೆ. ಆದರೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳವಾಗಿರುವುದು ಕಂಡು ಬಂತು. ಕರ್ನಾಟಕ ಬಂದ್ಗೆ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಕೂಡ ಬೆಂಬಲ ಸೂಚಿಸಿದೆ.