ಬೆಂಗಳೂರು: ರಾಜ್ಯದೆಲ್ಲೆಡೆ ವಿವಿಧ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ನಡೆಯುತ್ತಿರುವ ಬಂದ್ಗೆ ಚಿತ್ರರಂಗ ಕೂಡ ಬೆಂಬಲ ನೀಡಿದೆ.
ಕಾವೇರಿಗಾಗಿ ಬೀದಿಗಿಳಿಯಲಿರುವ ಸ್ಯಾಂಡಲ್ವುಡ್ ತಾರೆಯರು, ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಗುರುರಾಜ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಾಥ್ ನೀಡಿದರು.
ಈಗಾಗಲೇ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಶ್ರೀಮುರಳಿ, ದರ್ಶನ್, ಲೂಸ್ ಮಾದ ಯೋಗಿ, ಚಿಕ್ಕಣ್ಣ, ಶ್ರೀನಾಥ್, ಓಂ ಸಾಯಿ ಪ್ರಕಾಶ್, ರಘು ಮುಖರ್ಜಿ, ತಬಲ ನಾಣಿ, ಶ್ರೀಮುರಳಿ ವಿಜಯರಾಘವೇಂದ್ರ, ಶ್ರೀನಿವಾಸ್ ಮೂರ್ತಿ, ನಟಿಯರಾದ ಉಮಾಶ್ರೀ, ಪೂಜಾಗಾಂಧಿ, ಅನು ಪ್ರಭಾಕರ್, ರೂಪಿಕಾ, ಶೃತಿ, ಫಿಲ್ಮ್ ಚೇಂಬರ್ ಸದಸ್ಯರು ಸೇರಿದಂತೆ ನೂರಾರು ಕಿರುತೆರೆ ಕಲಾವಿದರು ಭಾಗಿಯಾಗಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್, ನಾವು ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ಚಿತ್ರೋದ್ಯಮದಿಂದ ರೈತರ ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತಿದ್ದೇವೆ ಎಂದು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನಟ ಶಿವರಾಜ್ ಕುಮಾರ್, ”ಕಾವೇರಿ ಸಮಸ್ಯೆ ಸೂಕ್ಷ್ಮ ವಿಚಾರ. ಹಾಗಾಗಿ ಇದು ನ್ಯಾಯಾಲಯದಲ್ಲಿಯೇ ಬಗೆಹರಿಬೇಕು. ಗಲಾಟೆ ಮಾಡಿದ್ರೆ ಏನು ಆಗಲ್ಲ. ಒಬ್ಬ ತಮಿಳು ನಟನಿಗೆ ನಿನ್ನೆ ಅವಮಾನವಾಗಿದೆ. ಯಾರು ಏತಕ್ಕಾಗಿ ಮಾಡ್ತಾರೆ ಗೊತ್ತಿಲ್ಲ. ಅದೇನೇ ಇರಲಿ ನಾವು ಈ ಸಮಸ್ಯೆಯಿಂದ ಶಾಶ್ವತವಾಗಿ ಆಚೆ ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಯೋಚನೆ ಮಾಡಬೇಕಿದೆ. ಒಳ್ಳೆಯ ಮನಸ್ಸಿಂದ ಯೋಚನೆ ಮಾಡಬೇಕು. ಆದರೆ, ಮತ್ತೊಬ್ಬರಿಗೆ ಹರ್ಟ್ ಮಾಡುವುದರಿಂದ ಇಂತಹ ಹೋರಾಟಕ್ಕೆ ಮರ್ಯಾದೆ ಇರಲ್ಲ. ಕನ್ನಡದ ಜನ ತುಂಬಾ ಒಳ್ಳೆಯವರು. ನಾನು ಹೃದಯದಿಂದ ಮಾತಾಡ್ತೀನಿ. ಯಾರು ಬೇಜಾರು ಮಾಡ್ಕೋಬೇಡಿ. ಇವತ್ತು ಇರ್ತೀವಿ, ನಾಳೆ ಇರಲ್ಲ. ಎಲ್ಲರೂ ಒಂದೇ, ಪ್ರೀತಿ ಜಾಸ್ತಿಯಾಗಲಿ” ಎಂದು ಹರಸುವ ಮೂಲಕ ನಟ ಸಿದ್ಧಾರ್ಥ್ಗೆ ಕ್ಷಮೆ ಕೇಳಿಕೊಂಡರು.