Breaking News

ಬುರ್ಖಾ ಧರಿಸಿ, ಖಾಲಿ ಬಿಂದಿಗೆ ಹೊತ್ತು ಪ್ರತಿಭಟನೆಗೆ ಬಂದ ವಾಟಾಳ್ ನಾಗರಾಜ್..

Spread the love

ಬೆಂಗಳೂರು: ಕಾವೇರಿ ನೀರಿಗಾಗಿ ನಡೆಯುತ್ತಿರುವ ಕರ್ನಾಟಕ ಬಂದ್​ ಹಿನ್ನೆಲೆಯಲ್ಲಿ ಟೌನ್​ ಹಾಲ್​ ಬಳಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಾಟಾಳ್​ ನಾಗರಾಜ್​, ಸಾ ರಾ ಗೋವಿಂದು ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದು ಫ್ರೀಡಂ ಪಾರ್ಕ್​​ಗೆ ಕರೆದೊಯ್ದಿದ್ದಾರೆ.

ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮುಂದುವರಿಯಲಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗುವ ಮುನ್ನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಬುರ್ಖಾ ಧರಿಸಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಾಟಾಳ್ ನಾಗರಾಜ್, “ಇವತ್ತು ಎರಡು ಬಂದ್ ನಡೆಯುತ್ತಿದೆ. ಒಂದು ಕಾವೇರಿಗಾಗಿ ನಾವು ಕರೆ ಕೊಟ್ಟಿರುವ ಬಂದ್, ಮತ್ತೊಂದು ಸರ್ಕಾರ ನಮ್ಮನ್ನು ಬಂದ್ ಮಾಡುತ್ತಿರುವುದು. ನಮ್ಮ ಬಂದ್ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಈಗಾಗಲೇ ಯಶಸ್ವಿಯಾಗಿದೆ. ನಾಡಿನ ಜನತೆಗೆ ನಾನು ಅಭಿನಂದಿಸುತ್ತೇನೆ. ರಾಜ್ಯ, ದೇಶದ ಮುಂದೆ ಇದು ಕರ್ನಾಟಕದ ಶಕ್ತಿ ಪ್ರದರ್ಶನ‌. ಸರ್ಕಾರ ಅರ್ಥ ಮಾಡಿಕೊಳ್ಳದೇ ಎಲ್ಲೆಂದರಲ್ಲಿ ಹೋರಾಟಗಾರರನ್ನು ಬಂಧಿಸುತ್ತಿದೆ. ತಮಿಳುನಾಡಿನ ಪೊಲೀಸರು ರಸ್ತೆ ತಡೆದಿದ್ದಾರೆ. ಆದರೆ ಇಲ್ಲಿ ನಮ್ಮನ್ನು ಪೊಲೀಸರು ಬಂಧಿಸುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಹೋರಾಟಗಾರರನ್ನು ಯಾಕೆ ಬಂಧಿಸಬೇಕು?: 144 ಸೆಕ್ಷನ್ ಜಾರಿ ಮಾಡುವ ಮೂಲಕ ಪೊಲೀಸ್ ರಾಜ್ಯ ಮಾಡಲು ಹೊರಟಿದ್ದಾರೆ. ಟೌನ್ ಹಾಲ್​ನಿಂದ ಮೆರವಣಿಗೆ ಮಾಡಬಾರದು. ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡಬೇಕಾ? ನಾವು ಶಾಂತಿಯುತವಾಗಿ ಮೆರವಣಿಗೆ ಮಾಡಿ ಮನವಿ ಸಲ್ಲಿಸಬೇಕೆಂದುಕೊಂಡಿದ್ದೆವು. ಆದರೆ ನೀವು ನಮ್ಮನ್ನು ಕರೆಯುವುದಿಲ್ಲ. ಸಚಿವರುಗಳೇನು ಪಾಳೇಗಾರರಾ? ಬಂದ್​ಗೆ ಅವಕಾಶವಿಲ್ಲ ಎನ್ನುವ ಗೃಹಮಂತ್ರಿಗಳೇ ನೀವು ಯಾವತ್ತು ಹೋರಾಟ ಮಾಡಿದ್ದೀರಿ? ಪರಮೇಶ್ವರನೇ ಹೀಗಾದರೆ ಸಾಮಾನ್ಯರ ಗತಿಯೇನು? ಮತ್ತೊಬ್ಬರು ದೇವರ ಮಗ ಶಿವಕುಮಾರ, ನೀವು ಕರುಣೆ ತೋರದಿದ್ದರೆ ಸಾಮಾನ್ಯರ ಗತಿಯೇನು? ಒಂದು ಕಡೆ ಪರಮೇಶ ಮತ್ತೊಂದು ಕಡೆ ಅವನ ಮಗ ಶಿವಕುಮಾರ ನಮಗೆ ಕರುಣೆ ತೋರಲಿಲ್ಲ. ಇತ್ತ ಸಿದ್ದರಾಮೇಶ್ವರನೂ ಕರುಣೆ ತೋರುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ನಾನು ಧರಿಸಿರುವುದನ್ನು ಬುರ್ಖಾ ಅಂತಲೂ ಕರೆಯಬಹುದು, ನ್ಯಾಯದೇವತೆಯ ಕಣ್ಣಿಗೆ ಕಟ್ಟಿರುವ ಕಪ್ಪು ಪಟ್ಟಿ ಅಂತಲೂ ಕರೆಯಬಹುದು. ಇದು ನ್ಯಾಯದ ಸಂದೇಶ ಎಂದು ವಾಟಾಳ್ ನಾಗರಾಜ್ ತಿಳಿಸಿದರು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ