ಬೆಂಗಳೂರು: ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಅಲ್ಪಾವಧಿ ಟೆಂಡರ್ ಕರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಗೃಹ ಕಚೇರಿ ಕಷ್ಣಾದಲ್ಲಿ ನಡೆದ ಸಭೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2023-24ನೇ ಸಾಲಿಗೆ ಕಬ್ಬು ಅರೆಯುವ ಕಾರ್ಯವನ್ನು ಲೀಸ್ ಮೂಲಕ ಪುನರಾರಂಭಿಸುವ ಕುರಿತು ಚರ್ಚಿಸಿದರು. ಈ ವೇಳೆ ಮಾತನಾಡಿ, ಕಬ್ಬು ಅರೆಯುವ ಕಾರ್ಯ ಪ್ರಾರಂಭವಾಗಬೇಕು. ಪುನಶ್ಚೇತನದಿಂದ ರೈತರಿಗೂ ಅನುಕೂಲ ಆಗಬೇಕು. ಅಲ್ಪಮಟ್ಟದ ಹೂಡಿಕೆಗೆ ಸಿದ್ಧವಿರುವ ಸಂಸ್ಥೆಗಳು ಟೆಂಡರ್ನಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಹಿರೇಮಠ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತ ರವಿಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ತಿಮ್ಮಾಪೂರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ 2020ರಿಂದ ಕಾರ್ಯಸ್ಥಗಿತಗೊಳಿಸಿದೆ. ಸ್ಥಗಿತಗೊಂಡಿರುವ ಸಕ್ಕರೆ ಕಾರ್ಖಾನೆ ಸಾಲದ ಸುಳಿಯಲ್ಲಿ ಸಿಲುಕಿ ಹಾನಿ ಅನುಭವಿಸುತ್ತಿದೆ. ರನ್ನ ಕಾರ್ಮಿಕರು, ನೌಕರರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ರಸ್ತೆ ತಡೆ ಹಾಗೂ ಭಿಕ್ಷೆ ಬೇಡುವುದು ಸೇರಿದಂತೆ ಹಲವು ಹಂತಗಳ ಹೋರಾಟಗಳ ಮೂಲಕ ಸರ್ಕಾರ ಹಾಗೂ ಆಡಳಿತ ಮಂಡಳಿಯನ್ನು ಎಚ್ಚರಿಸುವ ಕೆಲಸ ಮಾಡಿದ್ದರು.
ಕಾರ್ಮಿಕರ ವಿವಿಧ ಬೇಡಿಕೆಗಳು: ಕಾರ್ಖಾನೆಯ ನೌಕರರ, ಕಾರ್ಮಿಕರ ನಾನಾ ಬೇಡಿಕೆಗಳಿವೆ. ಕಾಯಂ 255, ಹಂಗಾಮಿ 152 ಹಾಗೂ ದಿನಗೂಲಿ 114 ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾತ್ಕಾಲಿಕವಾಗಿ 12 ತಿಂಗಳ ಸಂಬಳ ಪಾವತಿಯಾಗಬೇಕು. ಸಂಬಳ ಪಾವತಿಯಾದ ಬಳಿಕ ವಿವಿಧ ವೇತನ ಶ್ರೇಣಿಗಳ ಬದಲಾವಣೆಯಾಗಬೇಕೆಂಬ ಬೇಡಿಕೆಗಳಿವೆ.