ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷರ ಬಳಿ ಟಿಕೆಟ್ ಕೇಳಿದ್ದೇನೆ. ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಸೂಚಿಸಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಕರೆಸಿದ್ದರು. ಅವರೊಂದಿಗೆ ಸುದೀರ್ಘವಾದ ಚರ್ಚೆಯೂ ಆಯಿತು. ಚರ್ಚೆಯಾಗಿ ಅವರು ಪೂರಕವಾಗಿ ಸ್ಪಂದಿಸುತ್ತೇವೆ ಎಂದು ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಬಹುತೇಕ ಜನರು ಪರಿಚಯವಿರುವುದರಿಂದ ಹಾಗೂ ಎರಡು ಪಕ್ಷದ ಧುರೀಣರ ಪರಿಚಯ ಇರುವುದರಿಂದ ಚುನಾವಣೆಯನ್ನು ಮಾಡುವುದು ಅಂತಹ ಏನು ತೊಂದರೆ ಆಗಲಿಕ್ಕಿಲ್ಲ ಎಂದು ನನಗೆ ಅನ್ನಿಸುತ್ತೆ ಎಂದರು.
ನಾನು ಚುನಾವಣೆಗೆ ಅಪೇಕ್ಷಿತ. ನಾನು ಈಗಾಗಲೇ ಕಾರ್ಯಕರ್ತರೊಂದಿಗೆ, ನಾಯಕರೊಂದಿಗೆ ಮಾತನಾಡಿದ್ದೇನೆ. ಅವಕಾಶ ಕೊಟ್ಟರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದರು. ನಾನು ಪಶ್ಚಿಮ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಅದು ದುರ್ದೈವವಶಾತ್ ಏನೇನೋ ಕಾರಣದಿಂದ ತಪ್ಪಿತು. ಅದಕ್ಕೂ ಮೊದಲು ಬಿಜೆಪಿಯಿಂದ ಎಂಎಲ್ಸಿಗೆ ಆಕಾಂಕ್ಷಿಯಾಗಿದ್ದೆ. ನಮ್ಮ ಈ ಭಾಗದ ಜನಪ್ರಿಯ ಎಂಪಿಯಿಂದ ಅದು ತಪ್ಪಿತು. ಇನ್ನೇನು ಫೈನಲ್ ಆಗಿತ್ತು. ಬಿ ಫಾರ್ಮ್ ಬರುತ್ತೆ ಎನ್ನುವ ಸಮಯದಲ್ಲಿ ಬಸವರಾಜ ಹೊರಟ್ಟಿಯವರನ್ನು ಕರೆತಂದು ಟಿಕೆಟ್ ತಪ್ಪಿಸಿದರು ಎಂದು ಲಿಂಬಿಕಾಯಿ ಆರೋಪಿಸಿದರು.
ನಂತರ ಕಾಂಗ್ರೆಸ್ಗೆ ಸೇರ್ಪಡೆಯಾದಾಗ ಪಶ್ಚಿಮ ಕ್ಷೇತ್ರಕ್ಕೆ ಕೊಡುತ್ತೇವೆ ಎಂದು ಹೇಳಿದ್ರು. ಕ್ಷೇತ್ರದೊಳಗೆ ತಯಾರಿಯನ್ನು ಮಾಡಿಕೊಂಡಿದ್ದೆವು, ತಿರುಗಾಡಿದ್ದೆವು. ಏನೇನೋ ಕಾರಣದಿಂದ ತಪ್ಪಿತು. ಅದರ ಬಗ್ಗೆ ನಾವು ಯಾರನ್ನೂ ದೂಷಣೆ ಮಾಡಲು ಆಗುವುದಿಲ್ಲ. ಆದರೆ ಈಗ ನಮ್ಮ ಅಧ್ಯಕ್ಷರೇ ಕರೆಸಿ, ಸವಿಸ್ತಾರವಾಗಿ ಚರ್ಚಿಸಿ, ನಿಮಗೆ ಅನ್ಯಾಯವಾಗಿದೆ. ಸರಿ ಮಾಡೋಣ ಎಂದಿದ್ದಾರೆ. ನೀವು ಕ್ಷೇತ್ರದಲ್ಲಿ ಅಡ್ಡಾಡಿ, ನಿಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಪೂರಕವಾಗಿ ಮಾತನಾಡಿದ್ದರಿಂದ ನಾವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದರು.
ಈ ಬಾರಿ ನಾವು ಸಿರಿಯಸ್ ಆಗಿ ಸ್ಪರ್ಧಿಸಲಿದ್ದೇವೆ. ಅಲ್ಲದೇ ಆ ರೀತಿ ಸೀರಿಯಸ್ ಆಗಿ ಸ್ಪರ್ಧಿಸುವ ಯಾವುದೇ ಆಕಾಂಕ್ಷಿಗಳು ಇಲ್ಲ ಎಂದು ತಿಳಿದುಕೊಂಡಿದ್ದೇನೆ. ಮತ್ತು ಇಲ್ಲಿನ ಎಂಎಲ್ಸಿ, ಶಾಸಕರೊಂದಿಗೆ ಚರ್ಚೆ ಮಾಡಿ, ಪೂರಕವಾದಂತಹ ವಾತಾವರಣ ನಿರ್ಮಾಣವಾಗುತ್ತದೆ. ನಾನು ಖಂಡಿತವಾಗಿಯೂ ಅಭ್ಯರ್ಥಿಯಾಗುತ್ತೇನೆ. ನಾನು ಆ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.