Breaking News

ಗೃಹಲಕ್ಷ್ಮೀ, ಗೃಹಜ್ಯೋತಿ ಜಾಹೀರಾತುಗಳಲ್ಲಿ ಸಿಎಂ, ಡಿಸಿಎಂ ಫೋಟೋ ಬಳಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Spread the love

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜೋತಿ ಯೋಜನೆಗಳ ಜಾಹೀರಾತು ಮತ್ತು ಒಪ್ಪಿಗೆ ಆದೇಶಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳ ಭಾವಚಿತ್ರ, ಹೆಸರು ಬಳಕೆಗೆ ನಿರ್ಬಂಧ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

 

ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿದ್ದು, ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸುವುದಾಗಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಎಸ್. ಉಮಾಪತಿ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರ ಮತ್ತು ಹೆಸರು ಬಳಕೆ ಮಾಡಲಾಗುತ್ತದೆ. ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಮಂತ್ರಿಗಳ ಭಾವಚಿತ್ರ ಬಳಸದಂತೆ ಸುಪ್ರೀಂ ಕೋರ್ಟ್ ಆದೇಶವಿದೆ. ಉಲ್ಲಂಘಿಸಲಾಗಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾವಚಿತ್ರ ಬಳಕೆ ಮಾಡಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ಈ ಮೂಲಕ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಾದ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಾರ್ವಜನಿಕರಿಗೆ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದವರು ಸಹಜವಾಗಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಮತದಾರರಿಗೆ ರೂಪಿಸಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತಾರೆ. ಇದಕ್ಕೆ ಆಕ್ಷೇಪವಿದ್ದರೆ ಅಂಥವರನ್ನು ಆಯ್ಕೆ ಮಾಡಬಾರದು ಎಂದು ಪೀಠ ತಿಳಿಸಿತು. ಅಂತಿಮವಾಗಿ ಅರ್ಜಿಯನ್ನು ಪೀಠ ವಜಾಗೊಳಿಸಿ ಆದೇಶಿಸಿತು.

ಡಿಸೆಂಬರ್​ 9ರಂದು ರಾಜ್ಯಾದ್ಯಂತ ಲೋಕ ಅದಾಲತ್ : ಡಿಸೆಂಬರ್ 12ರಂದು ರಾಜ್ಯಾದ್ಯಂತ ಭೌತಿಕ ಮತ್ತು ಆನ್ಲೈನ್ ಮೂಲಕ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯಲಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸುವ ಮೂಲಕ ಜನರು ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್​ ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ಸಂಬಂಧಿತ ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರಗಳನ್ನು ಸಂಪರ್ಕಿಸಬಹುದಾಗಿದೆ. ಎನ್‌ಐ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ, ಕಾರ್ಮಿಕ ವಿವಾದ, ವಿದ್ಯುತ್ ಮತ್ತು ಕುಡಿಯುವ ನೀರಿನ ಬಿಲ್, ವೈವಾಹಿಕ ವಿವಾದಗಳು, ಭೂಸ್ವಾಧೀನ, ಕಂದಾಯ ಹಾಗೂ ಇತರೆ ಸಿವಿಲ್ ಪ್ರಕರಣಗಳು ಸೇರಿದಂತೆ ಭಿನ್ನ ರೀತಿಯ ಪ್ರಕರಣಗಳನ್ನು ಇತ್ಯರ್ಥಕ್ಕೆ ಪರಿಣಿಸಲಾಗುತ್ತದೆ.

ಪ್ರಕರಣಗಳು ಶೀಘ್ರ ಇತ್ಯರ್ಥವಾಗುತ್ತವೆ. ಅವಧಿಪೂರ್ವ ಪ್ರಕರಣಗಳಾದರೆ ನ್ಯಾಯಾಲಯದ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಲೋಕ ಅದಾಲತ್​ನಲ್ಲಿ ಪ್ರಕರಣಗಳು ಇತ್ಯರ್ಥವಾದರೆ ಈಗಾಗಲೇ ಪಾವತಿಸಲಾಗಿರುವ ನ್ಯಾಯಾಲಯದ ಶುಲ್ಕವನ್ನು ಮರಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು

Spread the love ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು ರಾಜ್ಯದ ಕಾನೂನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ