Breaking News

ಬರ ಪರಿಹಾರಕ್ಕೆ ಸರ್ಕಾರಕ್ಕೆ ಬೆಳಗಾವಿಯ ಕಡೋಲಿ ರೈತರ ಆಗ್ರಹ

Spread the love

ಬೆಳಗಾವಿ: ಮುಂಗಾರು ಮಳೆ ಕೈ ಕೊಟ್ಟಿದ್ದು ಜಿಲ್ಲೆಯ ಅನ್ನದಾತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಆಲೂಗಡ್ಡೆ ಬೆಳೆದಿರುವ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರೈತರು ಬೆಳೆ ಹಾನಿ ಭೀತಿಯಲ್ಲಿದ್ದು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಒಂದು ವರ್ಷ ಅತಿವೃಷ್ಟಿ, ಮತ್ತೊಂದು ವರ್ಷ ಅನಾವೃಷ್ಟಿ. ಇದು ರೈತರ ಜೀವನವನ್ನು ಕಂಗಾಲು ಮಾಡಿಬಿಟ್ಟಿದೆ. ಮಳೆ ನಂಬಿ ಸಾಲ ಮಾಡಿ ಬಿತ್ತಿದ್ದ ಆಲೂಗಡ್ಡೆ ಬೀಜಗಳು ಭೂಮಿಯಲ್ಲೇ ಕಮರಿವೆ. ಹಾಕಿದ ಗೊಬ್ಬರ ನೀರಿಲ್ಲದ್ದೇ ಮೇಲೆಯೇ ಇದೆ. ಇನ್ನೂ ಒಂದಿಷ್ಟು ಬೆಳೆದರೂ ಅಡಿಕೆ ಗಾತ್ರದ ಆಲೂಗಡ್ಡೆ ನೋಡಿ ಕಡೋಲಿಯ ರೈತರು ಕಣ್ಣೀರು ಸುರಿಸುತ್ತಿದ್ದಾರೆ.

ಕಡೋಲಿಯ 2,500 ಎಕರೆ ಭೂಮಿಯಲ್ಲಿ ಒಟ್ಟು 1,500 ಎಕರೆಯಲ್ಲಿ ಭತ್ತ ಬೆಳೆದಿದ್ದರೆ, ಇನ್ನುಳಿದ 1 ಸಾವಿರ ಎಕರೆ ಜಮೀನಿನಲ್ಲಿ ಆಲೂಗಡ್ಡೆ, ಗೆಣಸು, ಗೋವಿನಜೋಳ, ಸೋಯಾಬಿನ್ ಸೇರಿ ಇನ್ನಿತರ ಬೆಳೆಗಳನ್ನು ಬೆಳೆಯಲಾಗಿದೆ. ಬಹುತೇಕ ಈ ಎಲ್ಲ ಬೆಳೆಗಳು ಮಳೆಯ ಅಭಾವದಿಂದ ನೆಲಕಚ್ಚಿದ್ದು, ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಹೀಗಿದ್ದರೂ ಬೆಳಗಾವಿ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಈಟಿವಿ ಭಾರತ ಜೊತೆಗೆ ಅಳಲು ತೋಡಿಕೊಂಡ ರೈತ ಅಪ್ಪಾಸಾಹೇಬ ದೇಸಾಯಿ, “15 ವರ್ಷದ ಹಿಂದೆ ಇಂತಹ ಬರಗಾಲ ಕಂಡಿದ್ದೆವು. 1 ಎಕರೆಗೆ 8 ಕ್ವಿಂಟಲ್ ಆಲೂಗಡ್ಡೆ ಬೀಜ ಹಾಕಬೇಕಾಗುತ್ತದೆ. ಒಂದು ಕ್ವಿಂಟಲ್​ಗೆ 2 ಸಾವಿರ ರೂ. ದರವಿದೆ. ಹೀಗೆ 16 ಸಾವಿರ ರೂ. ಬೀಜ ಮತ್ತು ಗೊಬ್ಬರ ಸೇರಿ ಅಂದಾಜು 40 ಸಾವಿರ ರೂ ಖರ್ಚಾಗುತ್ತದೆ. ಇದೆಲ್ಲವನ್ನೂ ನೋಡಿ ರೈತರು ಎದೆ ಒಡೆದುಕೊಂಡು ಸಾಯುವ ಸ್ಥಿತಿ ಬಂದಿದೆ” ಎಂದರು.

“ಸ್ವತಃ ಜಿಲ್ಲಾಧಿಕಾರಿಗಳೇ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಮಗೆ ಎಕರೆಗೆ 50 ಸಾವಿರ ರೂ ಪರಿಹಾರ ಕೊಡುವುದಾದರೆ ಕೊಡಲಿ. ಇಲ್ಲವಾದರೆ ಅವರ ನಯಾಪೈಸೆ ಪರಿಹಾರವೂ ನಮಗೆ ಬೇಡ. ಮುಂದೇನು ಕ್ರಾಂತಿ ಆಗುತ್ತದೋ ಆಗಲಿ” ಎಂದು ಎಚ್ಚರಿಸಿದರು.

ರೈತ ಸುರೇಶ ಪಾಟೀಲ ಮಾತನಾಡಿ, “ಈ ಬಾರಿ ನಾವು ಮಾಡಿದ ಖರ್ಚು ಕೂಡ ವಾಪಸ್ ಬರುವುದಿಲ್ಲ. ಭತ್ತ, ಆಲೂಗಡ್ಡೆ, ಗೆಣಸು, ಗೋವಿನ ಜೋಳದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ನಮಗೆ ಬದುಕುವುದೇ ಕಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರ ಕೊಡುವುದಾದರೆ ಕೊಡಲಿ, ಇಲ್ಲವಾದರೆ ಅವರ ಯಾವುದೇ ರೀತಿ ಸಹಾನುಭೂತಿ ನಮಗೆ ಬೇಡ” ಎಂದು ಅಸಮಾಧಾನ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಗೋವಿನ ಗೆಜ್ಜೆಯಲ್ಲಿ ನಿರ್ಮಾಣವಾಗಿರುವ ಗಣೇಶನ ಮೂರ್ತಿ

Spread the loveದಾವಣಗೆರೆ : ಗಣೇಶ ಹಬ್ಬ ಬಂತು ಎಂದರೆ ಸಾಕು ತರಹೇವಾರಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಿ ವಿಘ್ನ ನಿವಾರಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ