ಚಿಕ್ಕೋಡಿ (ಬೆಳಗಾವಿ) : ಇಲ್ಲಿನ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವ ಸಾಧಾರಣ ಸಭೆಯಲ್ಲಿ ಆಡಳಿತ ಮಂಡಳಿ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಇಂದು ನಡೆದಿದೆ.
ಕಬ್ಬು ಕಟಾವು ಮಾಡಿದ 15 ದಿನದೊಳಗೆ ರೈತರ ಖಾತೆಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಂತೆ ಸಭೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಇಲ್ಲಿನ ಹಳ್ಯಾಳ ಗ್ರಾಮದಲ್ಲಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವ ಸಾಧಾರಣ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ರೈತರು ಮತ್ತು ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೆ ರೈತರು ಕಬ್ಬು ಕಟಾವಾದ 15 ದಿನದೊಳಗೆ ಖಾತೆಗೆ ಹಣ ಬಿಡುಗಡೆ ಮಾಡುವಂತೆ ಆಡಳಿತ ಮಂಡಳಿಯ ಅಧ್ಯಕ್ಷ ಪರಪ್ಪ ಸವದಿ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೇ ರೈತರ ಖಾತೆಗೆ ಹಣ ಹಾಕುವಂತೆ ಪಟ್ಟು ಹಿಡಿದಿದ್ದಾರೆ. ಈ ವೇಳೆ ರೈತರು ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯಿತು.
ನಾವು ಎಲ್ಲ ಖಾಸಗಿ ಸಕ್ಕರೆ ಕಾರ್ಖಾನೆಗಳಂತೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಆಡಳಿತ ಮಂಡಳಿ ಅಧ್ಯಕ್ಷರು ಹೇಳಿದಾಗ ರೈತರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ಸಹಕಾರಿ ಸಕ್ಕರೆ ಕಾರ್ಖಾನೆ. ರೈತರ ಪರವಾಗಿ ಇರಬೇಕು. ಇದು ಖಾಸಗಿ ಸಕ್ಕರೆ ಕಾರ್ಖಾನೆ ಅಲ್ಲ. ಹಾಗಾಗಿ ಸರ್ಕಾರದ ನಿಯಮಾವಳಿಯಂತೆ ಕಬ್ಬು ಕಟಾವು ಮಾಡಿ 14 ದಿನಗಳಲ್ಲೇ ರೈತರ ಖಾತೆಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಅಲ್ಲದೆ 2018-2019ರಲ್ಲಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಜೊತೆಗೆ ಕಾರ್ಖಾನೆ ವತಿಯಿಂದ ರೈತರ ಏಳಿಗೆಗಾಗಿ ಯೋಜನೆಯನ್ನು ರೂಪಿಸಬೇಕು. ಕಾರ್ಖಾನೆಯಿಂದಲೇ ರೈತರಿಗೆ ಗೊಬ್ಬರ ವಿತರಿಸುವಂತೆ ಒತ್ತಾಯ ಮಾಡಿದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಕಾರ್ಖಾನೆ ಆಡಳಿತ ಮಂಡಳಿ ನೀಡಿದರು. ಅಥಣಿ ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಸಹೋದರ ಪರಪ್ಪ ಸವದಿ ಅವರು ಕೃಷ್ಣ ಸಕ್ಕರೆ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರ ಈ ವರ್ತನೆ ರೈತರಿಗೆ ಬೇಸರ ಮೂಡಿಸಿದೆ ಎಂದು ರೈತ ಅಣ್ಣಪ್ಪ ಹಳ್ಳೂರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.