ಬೆಂಗಳೂರು: ಮೂವರು ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ ಎನ್ ರಾಜಣ್ಣ ತಮ್ಮ ಅಭಿಪ್ರಾಯ ಹೇಳೋದರಲ್ಲಿ ತಪ್ಪಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ದೃಷ್ಟಿಯಿಂದ ಅವರು ಹೇಳಿದ್ದಾರೆ. ಪಕ್ಷ ಇನ್ನಷ್ಟು ಸದೃಢವಾಗಬೇಕು, ಆ ನಿರ್ದಿಷ್ಟ ಸಮುದಾಯಗಳನ್ನು ಸೆಳೆಯಬೇಕು ಎಂಬ ದೃಷ್ಟಿಯಿಂದ ಹೇಳಿದ್ದಾರೆ ಎಂದು ತಿಳಿಸಿದರು. ರಾಜಣ್ಣ ಅವರು ತಪ್ಪು ಮಾಡಿದರು, ತಪ್ಪು ಹೇಳಿದರು ಅನ್ನೋದಲ್ಲ. ಅವರು ವೈಯುಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ನಾನು ವೈಯುಕ್ತಿಕ ಹೇಳಿಕೆ ಕೊಡುತ್ತೇನೆ. ಆದರೆ ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ ಅನ್ನೋದು ಮುಖ್ಯ. ಸಂಪೂರ್ಣವಾಗಿ ಎಲ್ಲವೂ ಹೈ ಕಮಾಂಡ್ ಗೆ ಬಿಟ್ಟಿರುವುದು ಎಂದು ಸ್ಪಷ್ಟನೆ ನೀಡಿದರು.
ಲೋಕಸಭೆಯಲ್ಲಿ ಸೋತರೆ ಮ್ಯಾಂಡೇಟ್ ಇಲ್ಲ ಎಂದು ಸರ್ಕಾರ ವಿಸರ್ಜಸಿದ ಘಟನೆ ನಡೆದಿದೆ ಎಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಇದ್ದರೆ ಇರಬಹುದು. ಹಿಂದೆ ಅಂತಹ ಘಟನೆಗಳು ನಡೆದಿದ್ದಾವಲ್ಲ. ಹಿಂದೆ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ನಡೆದಿದೆ. ಆದರೆ ಈ ಬಾರಿ ಹಾಗೆ ಆಗಬಾರದು ಎಂದು ಎಚ್ಚರಿಕೆ ಕೊಟ್ಟಿರಬಹುದು. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಬಂದರೆ ನಮಗೆ ಅನುಕೂಲ ಅಲ್ವಾ? ಅದಕ್ಕೆ ಇದೆಲ್ಲಾ ಸರ್ಕಸ್ ನಡೆಯುತ್ತಿರುವುದು ಎಂದು ತಿಳಿಸಿದರು.
ಮೂರು ಡಿಸಿಎಂ ವಿಚಾರ ಪಕ್ಷದ ನಿರ್ಧಾರವೇ ಅಂತಿಮ: ಸಚಿವ ಸತೀಶ್ ಜಾರಕಿಹೊಳಿ
ರಾಜ್ಯದಲ್ಲಿ ಮೂರು ಡಿಸಿಎಂ ಸ್ಥಾನ ವಿಚಾರವಾಗಿ ಸಚಿವ ಕೆ ಎನ್ ರಾಜಣ್ಣ ಮುಂಚೆಯಿಂದಲೇ ಹೇಳ್ತಿದ್ದಾರೆ. ಪಕ್ಷವೂ ಅಂತಿಮವಾಗಿ ನಿರ್ಧಾರ ಮಾಡಬೇಕು. ಡಿಸಿಎಂ ಒಬ್ಬರು ಇರಬೇಕಾ, ಮೂವರು ಇರಬೇಕಾ, ನಾಲ್ಕು ಜನ ಇರಬೇಕಾ ಎಂಬುದನ್ನು ಪಕ್ಷ ನಿರ್ಧರಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಅಂತಿಮವಾಗಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದ ಸಚಿವರು, ಸಮಾಜಕ್ಕೆ ನ್ಯಾಯ ಒದಗಿಸಿಕೊಡಲಿಕ್ಕೆ ಡಿಸಿಎಂ ಸ್ಥಾನ ಹೆಚ್ಚಿಸುವ ಕೆಲಸ ಅಷ್ಟೇ, ಅದು ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲಿಕ್ಕೆ ಡಿಸಿಎಂ ಸ್ಥಾನ ಸೃಷ್ಟಿಸುತ್ತಿಲ್ಲ ಎಂದಿದ್ದರು.
ನಮ್ಮ ಪಕ್ಷಕ್ಕೆ ಎಸ್ಸಿ, ಎಸ್ಟಿ ಕೆಳಹಂತದ ಜನ ಮತ ನೀಡಿದ್ದಾರೆ. ಆ ವರ್ಗಗಳಿಗೆ ನ್ಯಾಯ ಸಿಗಬೇಕು ಅನ್ನೋ ಆಶಯ ಬಹಳ ಜನರದ್ದು ಇದೆ. ಅದನ್ನು ಪಕ್ಷ ನಿರ್ಧರಿಸುತ್ತದೆ ಎಂದ ಸತೀಶ್ ಜಾರಕಿಹೊಳಿ, ನನಗೆ ಡಿಸಿಎಂ ಸ್ಥಾನ ನೀಡಿದ್ರೆ ನಾ ಬೇಡಾ ಅಂತೀನಾ?. ಈಗ ನಾ ಮಂತ್ರಿ ಆಗಿದ್ದಿನಿ. ಮುಂದೆ ಸಿಎಂ ಅವರಿಂದ ಒಂದು ಲೆಟರ್ ಹೋದರೆ, ಡಿಸಿಎಂ ಆಗಬಹುದು ಎಂದು ತಾವು ಡಿಸಿಎಂ ಆಗುವ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿದರು.