Breaking News

ಮೈಸೂರು ದಸರಾ -2023.. ಅಂಬಾರಿ ಹೊರುವ ಆನೆಗೆ ಸಿದ್ಧವಾಗುತ್ತಿದೆ ನಮ್ದಾ

Spread the love

ಮೈಸೂರು : ಐತಿಹಾಸಿಕ ಮೈಸೂರು ದಸರಾಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ದಸರಾ ಹಬ್ಬದ ಪ್ರಮುಖ ಕೇಂದ್ರ ಬಿಂದುವಾದ ಜಂಬೂಸವಾರಿಗೆ ಗಜಪಡೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಗಜಪಡೆಗೆ ಭಾರ ಹೊರುವ ತಾಲೀಮು ಈಗಾಗಲೇ ಆರಂಭವಾಗಿದ್ದು, ಜಂಬೂಸವಾರಿ ದಿನ ಅಂಬಾರಿ ಹೊರುವ ಅಭಿಮನ್ಯು ಆನೆಯ ಬೆನ್ನಿನ ಮೇಲೆ ಹಾಕುವ ನಮ್ದಾವನ್ನು ಇಲ್ಲಿ ಸಿದ್ಧಪಡಿಸಲಾಗುತ್ತಿದೆ.

ಜಂಬೂಸವಾರಿಯ ಪ್ರಮುಖ ಆಕರ್ಷಣೆ ಎಂದರೆ ಚಿನ್ನದ ಅಂಬಾರಿ ಮತ್ತು ಅಂಬಾರಿ ಹೊರುವ ಆನೆ. ಅಂಬಾರಿ ಹೊರುವ ಆನೆಯು 750 ಕೆಜಿ ಚಿನ್ನದ ಅಂಬಾರಿಯನ್ನು ಹೊತ್ತು ಅರಮನೆಯಿಂದ ಬನ್ನಿ ಮಂಟಪದವರೆಗೆ ಸುಮಾರು 5 ಕಿಲೋಮೀಟರ್ ನಡೆದುಕೊಂಡು ಬರುತ್ತದೆ. ಚಿನ್ನದ ಅಂಬಾರಿಯನ್ನು ಆನೆಯ ಮೇಲೆ ಇರಿಸುವ ಮುನ್ನ, ಆನೆಯ ಬೆನ್ನ ಮೇಲೆ ನಮ್ದಾವನ್ನು ಹಾಕಲಾಗುತ್ತದೆ. ಬಳಿಕ ಗಾದಿ ಹಾಕಿ ಅದರ ಮೇಲೆ ಬೇರೊಂದು ಹೊದಿಕೆಯನ್ನು ಹಾಕಲಾಗುತ್ತದೆ. ನಂತರ ಆನೆಯ ಮೇಲೆ 750 ಕೆಜಿ ತೂಕದ ಅಲಂಕೃತ ಚಿನ್ನದ ಅಂಬಾರಿಯನ್ನು ಇಡಲಾಗುತ್ತದೆ. ಅಂಬಾರಿಯಲ್ಲಿ ಹೂವುಗಳಿಂದ ಅಲಂಕೃತಗೊಂಡ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಕೂರಿಸಲಾಗುತ್ತದೆ. ಬಳಿಕ ಜಂಬೂಸವಾರಿ ಮೆರವಣಿಗೆಗೆ ಗಣ್ಯರು ಪುಷ್ಪಾರ್ಚನೆ ಮಾಡಿದ ಬಳಿಕ ಜಂಬೂ ಸವಾರಿ ಬನ್ನಿ ಮಂಟಪದವರೆಗೆ ಸಾಗುತ್ತದೆ.

ನಮ್ದಾ ಎಂದರೇನು ? : ತೆಂಗಿನಕಾಯಿಯ ಸಿಪ್ಪೆಯಿಂದ ತೆಗೆಯಲ್ಪಟ್ಟ ನಾರಿನಿಂದ ತಯಾರಿಸುವ ಬೃಹತ್​ ದಿಂಬು ಮಾದರಿ ವಸ್ತುವನ್ನು ನಮ್ದಾ ಎಂದು ಕರೆಯಲಾಗುತ್ತದೆ. ತೆಂಗಿನ ನಾರುಗಳನ್ನು ಸ್ವಚ್ಛಗೊಳಿಸಿ ಬಳಿಕ ಗೋಣಿ ಚೀಲದ ಒಳಗೆ ತುಂಬಲಾಗುತ್ತದೆ. ಈ ನಮ್ದಾವನ್ನು ಅಂಬಾರಿ ಹೊರುವ ಆನೆಯ ಬೆನ್ನಿನ ಮೇಲೆ ಹಾಕಲಾಗುತ್ತದೆ. ಬಳಿಕ ನಮ್ದಾದ ಮೇಲೆ ಅಂಬಾರಿಯನ್ನು ಇರಿಸಲಾಗುತ್ತದೆ. ಇದರಿಂದ ಭಾರ ಹೊರುವ ಆನೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ನಮ್ದಾ ಮತ್ತು ಗಾದಿಯನ್ನು ಕಟ್ಟಿದ ಬಳಿಕ ಆನೆ ಮೇಲೆ ಚಿನ್ನದ ಅಂಬಾರಿ ಇರಿಸಲಾಗುತ್ತದೆ.

ಈ ನಮ್ದಾವನ್ನು ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಹತ್ತಿರ ಅರಣ್ಯ ಇಲಾಖೆಯ ಅಕ್ರಂ ಎಂಬವರು ಹಲವು ವರ್ಷಗಳಿಂದ ಸಿದ್ಧಪಡಿಸುತ್ತಾ ಬಂದಿದ್ದಾರೆ. ಜಂಬೂಸವಾರಿಯ ದಿನ ಅಂಬಾರಿ ಹೊರುವ ಆನೆಗೆ ನಮ್ದಾ ಮತ್ತು ಗಾದಿ ಹಾಕಿ, ಅದರ ಮೇಲೆ ಚಿನ್ನದ ಅಂಬಾರಿ ಕಟ್ಟುವ ಕೆಲಸವನ್ನು ಮಾಡುತ್ತಾರೆ. ವಿಜಯದಶಮಿಯ ದಿನ ಗಣ್ಯರು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಅರಮನೆಯಿಂದ ಕೆ ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಸರ್ಕಲ್ ಮೂಲಕ 5 ಕಿಲೋಮೀಟರ್ ಜಂಬೂಸವಾರಿ ಸಾಗಲಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ