ಬೆಂಗಳೂರು : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಿದರೆ, ದೊಡ್ಡವರ ಹೆಸರು ಬಹಿರಂಗವಾಗಲಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ಬಂಧಿತೆ ಚೈತ್ರಾ ಕುಂದಾಪುರ ಸಿಸಿಬಿ ವಿಚಾರಣೆ ವೇಳೆ ಮೌನವಾಗಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ 5 ಕೋಟಿ ರೂ. ವಂಚನೆ ಆರೋಪದಡಿ ಬಂಧಿತರಾಗಿದ್ದ ಚೈತ್ರಾ, ಮಾಧ್ಯಮಗಳ ಮುಂದೆ ಸ್ವಾಮೀಜಿ ಹಾಲಶ್ರೀ ಬಂಧಿಸಿದರೆ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ತಿರುವು ಕೊಟ್ಟಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸ್ವಾಮೀಜಿ ಬಂಧನ ಬಳಿಕ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿರುವ ಬಗ್ಗೆ ತನಿಖಾಧಿಕಾರಿಗಳು ಶಂಕಿಸಿದ್ದರು.
ಎರಡು ದಿನಗಳ ಹಿಂದೆ ಹಾಲಶ್ರೀ ಬಂಧಿಸಿದ್ದರು. ಸ್ವಾಮೀಜಿ ವಿಚಾರಣೆ ವೇಳೆ ಚೈತ್ರಾ ಕುಂದಾಪುರ ಹಾಗೂ ಗಗನ್ ಎಂಬುವರೇ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು, ಇದರ ಹಿಂದೆ ಯಾರು ದೊಡ್ಡವರಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು ಎನ್ನಲಾಗಿದೆ. ಮತ್ತೊಂದೆಡೆ ವಿಚಾರಣೆ ಎದುರಿಸುತ್ತಿರುವ ಚೈತ್ರಾಳನ್ನು ಪ್ರಶ್ನಿಸಿದರೆ ಮೌನಕ್ಕೆ ಜಾರಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಅನ್ಯ ವ್ಯಕ್ತಿಗಳು ಯಾರಿಲ್ಲ. ಸ್ವಾಮೀಜಿ, ಗಗನ್ ಸೇರಿ ಇನ್ನಿತರ ಆರೋಪಿಗಳು ಕೃತ್ಯವೆಸಗಿದ್ದೇವೆ ಎಂದು ಚೈತ್ರಾ ಎಂದು ಒಪ್ಪಿಕೊಂಡಿರುವುದಾಗಿ ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.