ಚಿಕ್ಕೋಡಿ: ಅನಾರೋಗ್ಯದಿಂದ ಮೃತಪಟ್ಟ ಯೋಧನ ಅಂತ್ಯ ಸಂಸ್ಕಾರವನ್ನು ಸ್ವಗ್ರಾಮ ಸಿದ್ದಾಪುರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸಿದ್ದಾಪುರ ಗ್ರಾಮದ ಯೋಧ ಸಂತೋಷ್ ಯಳಗೂಡ (30) ಸೆಪ್ಟೆಂಬರ್ 19ರಂದು ಮಧ್ಯರಾತ್ರಿ ಎರಡು ಗಂಟೆಗೆ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಕಾಮಾಲೆ ರೋಗದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಇಂದು ಅವರ ಹುಟ್ಟುರಾದ ಸಿದ್ದಾಪುರ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತಂದಿದ್ದು, ರಸ್ತೆ ಉದ್ದಕ್ಕೂ ಗ್ರಾಮದ ಜನರು ಮತ್ತು ಶಾಲೆ ಮಕ್ಕಳು ಪುಷ್ಪ ಮಳೆ ಸುರಿಸುವ ಮೂಲಕ ಭಾರತ್ ಮಾತಾ ಕಿ ಜೈ – ಸಂತೋಷ್ ಅಮರ್ ಹೈ ಎಂದು ಜಯ ಘೋಷ ಕೂಗಿ, ಅಂತಿಮ ನಮನ ಸಲ್ಲಿಸಿದ್ದಾರೆ. ಮೃತ ಯೋಧನ ತಂದೆ- ತಾಯಿ, ಹೆಂಡತಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವೀರಯೋಧನ ಕಳೆದುಕೊಂಡು ಗ್ರಾಮಸ್ಥರು ಕಂಬನಿ ಮಿಡಿದರು.
ಅಂತ್ಯ ಸಂಸ್ಕಾರದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣವರ್ ಭಾಗವಹಿಸಿ ಅಂತಿಮ ದರ್ಶನವನ್ನು ಪಡೆದರು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಅವರ ತೋಟದಲ್ಲಿ ಮೃತ ಸೈನಿಕನಿಗೆ ಅಗ್ನಿ ಸ್ಪರ್ಶ ಮಾಡುವ ಮುಖಾಂತರ ಅಂತ್ಯಸಂಸ್ಕಾರ ನಡೆಸಲಾಯಿತು. ಎಂಟು ವರ್ಷದ ಹಿಂದೆ ಭಾರತೀಯ ಸೈನ್ಯಕ್ಕೆ ಸೇರಿ ಸೇವೆ ಪ್ರಾರಂಭಿಸಿ ದೇಶದ ವಿವಿಧ ರಾಜ್ಯಗಳ ಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು.
Laxmi News 24×7