ಚಿಕ್ಕೋಡಿ : ಕೂದಲು ಆರಿಸುವ ವಿಚಾರಕ್ಕೆ ದುಷ್ಕರ್ಮಿಗಳು ಬಾಲಕನನ್ನು ಕೊಲೆ ಮಾಡಿ ಬಾವಿಯಲ್ಲಿ ಎಸೆದಿರುವ ಪ್ರಕರಣ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದ ಲಾಲ್ಯಾನಕೋಡಿಯಲ್ಲಿ ಘಟನೆ ನಡೆದಿದೆ. ಕಾಮಪ್ಪ ಕುಂಚಿಕೊರವ (17) ಕೊಲೆಗೀಡಾದ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಕ ಮೂಲತಃ ವಿಜಯಪುರ ಜಿಲ್ಲೆಯ ನಿವಾಸಿ, ಈತ ಕೂದಲು ಆರಿಸುತ್ತ ಹಾರೂಗೇರಿ ಪಟ್ಟಣಕ್ಕೆ ಆಗಮಿಸಿದ್ದಾನೆ. ಆಗ ಸ್ಥಳೀಯವಾಗಿ ಕೂದಲು ಆರಿಸುವರು ನೀನು ಇಲ್ಲೇಕೆ ಬಂದಿದೆಯಾ ಎಂದು ಪ್ರಶ್ನಿಸಿದ್ದಾರೆ. ಆಗ ಗಲಾಟೆ ನಡೆದು ಬಾಲಕನ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಾರೂಗೇರಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಕಾಮಪ್ಪ ತಾಯಿ ದುರ್ಗವ್ವ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಭಾನುವಾರ ದಿನದಂದು ಬಸ್ಸಿನ ಮುಖಾಂತರ ವಿಜಯಪುರದಿಂದ ಪ್ರಯಾಣ ಬೆಳೆಸಿ ಹಾರೂಗೇರಿಗೆ ಕೂದಲು ಆರಿಸಲು ಮಗ ಬಂದಿದ್ದ. ಈ ವೇಳೆ ಕೆಲ ಸ್ಥಳೀಯ ಕೂದಲು ಆರಿಸುವವರು ನೀನೇಕೆ ನಮ್ಮ ಏರಿಯಾಗೆ ಬರ್ತೀಯಾ ಅಂತಾ ಗಲಾಟೆ ಮಾಡಿದ್ದಾರೆ. ಇದೇ ರೀತಿ ಈ ಮುಂಚೆಯೂ ಜಗಳ ಮಾಡಿದ್ದರಂತೆ. ಹದಿನೈದು ಜನರ ತಂಡ ನನ್ನ ಮಗ ಹಾಗೂ ಆತನ ಸ್ನೇಹಿತನನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಈ ವೇಳೆ ನಮ್ಮ ಮಗನ ಗೆಳೆಯ ಒಬ್ಬ ತಪ್ಪಿಸಿಕೊಂಡು ಹೋಗಿದ್ದಾನೆ. ಕೈಗೆ ಸಿಕ್ಕ ಕಾಮಪ್ಪನನ್ನು ಹೊಡೆದು ಬಾವಿಯಲ್ಲಿ ಬಿಸಾಕಿದ್ದಾರೆ ಅಂತಾ ತಾಯಿ ಆರೋಪಿಸುತ್ತಿದ್ದಾಳೆ. ಎರಡು ದಿನಗಳ ಕಾಲ ನಿರಂತರವಾಗಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬೇರೆ ಏನೂ ದ್ವೇಷ ಇರಲಿಲ್ಲ. ಬೇರೆ ಊರಿನವರು ನಮ್ಮ ಊರಿಗೆ ಬಂದು ಏಕೆ ಕೂದಲು ಸಂಗ್ರಹಿಸುತ್ತೀರಿ ಅಂತಾ ಗಲಾಟೆ ಮಾಡಿ ಹತ್ಯೆ ಮಾಡಿದ್ದಾಗಿ ತಾಯಿ ಹೇಳಿದ್ದಾಳೆ.
ನೆಲಕ್ಕೆ ಎಸೆದು ನಾಲ್ಕು ತಿಂಗಳ ಮಗುವನ್ನು ಕೊಂದ ಕಾನ್ಸ್ಟೇಬಲ್( ಪ್ರತ್ಯೇಕ ಪ್ರಕರಣ) : ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ವ್ಯಕ್ತಿಯೊಬ್ಬ ತನ್ನ 4 ತಿಂಗಳ ಮಗುವನ್ನು ಡಾಂಬರು ರಸ್ತೆಗೆಸೆದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಮುಡಲಗಿ ತಾಲೂಕಿನ ದುರದುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್ ಕಾನ್ಸ್ಟೇಬಲ್ ಬಸಪ್ಪ ಬಳುಣಕಿ ತನ್ನ ಮಗುವನ್ನೇ ಕೊಂದ ಆರೋಪಿ ಎಂಬುದು ತಿಳಿದುಬಂದಿದೆ. ಈತ ಡಾಂಬರು ರಸ್ತೆಗೆಸೆದು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.