ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯೂ ಒಂದು. ಸಾಮಾನ್ಯ ಸರ್ಕಾರಿ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಯೋಜನೆ ಇದಾಗಿದೆ.
ಈ ಯೋಜನೆಯ ಅನುಷ್ಠಾನದ ಉತ್ಸಾಹದಲ್ಲಿ ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ಇತರ ಪ್ರಮುಖ ಯೋಜನೆಗಳನ್ನು ನಿರ್ಲಕ್ಷಿಸಿದೆಯೇ? ಎಂಬ ಅನುಮಾನ ಮೂಡಿದೆ.
‘ಶಕ್ತಿ ಯೋಜನೆ’ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅನುಷ್ಠಾನ ಮಾಡಿದ ಮೊದಲ ಗ್ಯಾರಂಟಿ ಯೋಜನೆ. 2023-24ರ ಸಾಲಿನಲ್ಲಿ ಮಹತ್ವಾಕಾಂಕ್ಷೆಯ ಈ ಗ್ಯಾರಂಟಿ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಒಟ್ಟು 2,800 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಜೂ.11ಕ್ಕೆ ಆರಂಭಿಸಿರುವ ಈ ಯೋಜನೆಗೆ ಆಗಸ್ಟ್‌ವರೆಗೆ ಸರ್ಕಾರ ಒಟ್ಟು 490.74 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ.
ಶಕ್ತಿ ಸಾರಿಗೆ ಇಲಾಖೆಯ ಆದ್ಯತೆಯ ಯೋಜನೆ. ಕೇಂದ್ರೀಕರಿಸಿ ಸಾರಿಗೆ ಇಲಾಖೆ ತನ್ನೆಲ್ಲಾ ಸಂಪನ್ಮೂಲವನ್ನು ಬಿಡುಗಡೆ ಮಾಡುತ್ತಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಸಾರಿಗೆ ಇಲಾಖೆ ಶಕ್ತಿ ಯೋಜನೆಯನ್ನು ಅನುಷ್ಠಾನ ಮಾಡಿದೆ. ಆದರೆ, ಶಕ್ತಿಯ ಅಬ್ಬರದ ಮಧ್ಯೆ ಇಲಾಖೆಯ ಇತರ ಪ್ರಮುಖ ಯೋಜನೆಗಳು ನಿರ್ಲಕ್ಷ್ಯಕ್ಕೊಳಪಟ್ಟಿರುವುದು ಎದ್ದು ಕಾಣುತ್ತಿದೆ. ಈ ಯೋಜನೆಗೆ ಹಣ ಹೊಂದಿಸುವ ಅನಿವಾರ್ಯತೆಯಲ್ಲಿ ಇತರ ಪ್ರಮುಖ ಜನೋಪಯೋಗಿ ಯೋಜನೆಗಳಿಗೆ ಆಗಸ್ಟ್‌ವರೆಗೂ ಅನುದಾನವನ್ನು ಬಿಡುಗಡೆ ಮಾಡಿಲ್ಲ.
ಪ್ರಮುಖ ಯೋಜನೆಗಳಿಗೆ ಶೂನ್ಯ ಅನುದಾನ: ಆಗಸ್ಟ್‌ವರೆಗಿನ ಕೆಡಿಪಿ ಪ್ರಗತಿ ವರದಿ ಪ್ರಕಾರ, “ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದೆ. ರಸ್ತೆ ಸಾರಿಗೆ ನಿಗಮಗಳ ಇತರ ಮಹತ್ವದ ಯೋಜನೆಗಳನ್ನು ಕಡೆಗಣಿಸಿರುವುದು ಸ್ಪಷ್ಟ. ಬಹುತೇಕ ಪ್ರಮುಖ ಜನೋಪಯೋಗಿ ಯೋಜನೆಗಳಿಗೆ ಸರ್ಕಾರ ಆರ್ಥಿಕ ವರ್ಷದ 5 ತಿಂಗಳು ಕಳೆದರೂ ಇನ್ನೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಇದರ ಹಿಂದೆ ಹಣಕಾಸಿನ ಕೊರತೆ ಕಾರಣವೇ? ಎಂಬ ಅನುಮಾನ ಬಲವಾಗಿ ಮೂಡಿದೆ.