ಮಂಗಳೂರು: ಚೈತ್ರಾ ಕುಂದಾಪುರ ವಂಚನೆ ಆರೋಪ ಪ್ರಕರಣದಲ್ಲಿ ಇದೀಗ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ತಾನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜೊತೆಗೆ, ಇದೊಂದು ಷಡ್ಯಂತ್ರದ ಭಾಗವಾಗಿ ಕಂಡು ಬರುತ್ತಿದ್ದು, ಆದರಿಂದ ಸಿಸಿಬಿ ಅಧಿಕಾರಿಗಳು ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಏನಾಗಿದೆ ಎಂದು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ “ಮಾಜಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಜುಲೈ ತಿಂಗಳಲ್ಲಿ ಫೋನ್ ಮಾಡಿ ಈ ಪ್ರಕರಣದಲ್ಲಿ ನಿಮ್ಮ ಹೆಸರು ಇದೆ. ಗೋವಿಂದ ಬಾಬು ಪೂಜಾರಿ ಅವರು ನಿಮಗೆ ಒಂದೂವರೆ ಕೋಟಿ ನೀಡಿದ್ದಾರೆ ಎಂದು ಕೇಳಿಬರುತ್ತಿದೆ. ನೀವು ಆ ಹಣವನ್ನು ವಾಪಸ್ ನೀಡಿ ಎಂದು ಹೇಳಿದ್ದರು”. ಆಗ ನಾನು ಉತ್ತರಿಸಿ, “ಈ ಪ್ರಕರಣದಲ್ಲಿ ನಾನಿಲ್ಲ ಎಂದು ಆಕ್ರೋಶವಾಗಿ ಹೇಳಿದ್ದು ಆ ಬಳಿಕ ಫೋನ್ ಕಟ್ ಮಾಡಿದ್ದರು. ಆನಂತರ ಈ ವಿಚಾರದಲ್ಲಿ ನಾನು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ ಮತ್ತು ಬಜರಂಗದಳದ ಮುಖಂಡರಿಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸಿದ್ದೇವೆ. ಆಗ ಅವರು ಈ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಕೋಪ ಮಾಡಿಕೊಳ್ಳುವುದು ಬೇಡ ಎಂದು ಸಮಾಧಾನಪಡಿಸಿದ್ದರು. ಇದಾದ ಬಳಿಕ ಮತ್ತೆ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿ ನಾನು ತಪ್ಪಿ ನಿಮ್ಮ ಹೆಸರು ಹೇಳಿದ್ದೇನೆ. ಅದು ಅಭಿನವ ಸ್ವಾಮೀಜಿ ಎಂದು ಗೊತ್ತಾಗಿದೆ ಎಂದು ಮಾತನಾಡಿದರು”.