ನವದೆಹಲಿ: ಸೆಪ್ಟೆಂಬರ್ 18 ರಂದು ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೂ ಮುನ್ನ, ‘ಅಮೃತ್ ಕಾಲ’ ಸಮಯದಲ್ಲಿ ಸರ್ಕಾರವು ಕರೆದಿರುವ ಅಧಿವೇಶನಕ್ಕೆ ಮೂರು ದಿನಗಳ ಮೊದಲು ಹೊಸ ಮತ್ತು ಹಳೆಯ ಸಂಸತ್ತಿನೊಂದಿಗೆ ಪೂರ್ವಾಭ್ಯಾಸ ಕಾರ್ಯ ಕೈಗೊಳ್ಳಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಹಳೆಯ ಕಟ್ಟಡದಲ್ಲಿ ಒಂದು ದಿನ ಹಾಗೂ ಹೊಸ ಕಟ್ಟಡದಲ್ಲಿ ಎರಡು ದಿನ ತಾಲೀಮು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಹಳೆ ಕಟ್ಟಡದಲ್ಲಿ ವಿಶೇಷ ಅಧಿವೇಶನಕ್ಕೆ ಈಗಾಗಲೇ ಸಕಲ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ವಿಶೇಷ ಅಧಿವೇಶನದ ಮೊದಲ ದಿನ ಅಂದರೆ ಸೆ.18ರಂದು ಫೋಟೊ ಸೆಷನ್ ನಡೆಯಲಿರುವುದರಿಂದ ಅಲ್ಲಿಯೂ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂತನ ಸಂಸತ್ ಭವನದಲ್ಲಿ ಇದೇ ಮೊದಲ ಬಾರಿಗೆ ಅಧಿವೇಶನದ ಕಾರ್ಯಕಲಾಪಗಳು ನಡೆಯಲಿವೆ. ಹೊಸ ಕಟ್ಟಡದಲ್ಲಿ ಎಲ್ಲ ವ್ಯವಸ್ಥೆ ಮತ್ತು ಸೌಲಭ್ಯಗಳನ್ನು ಪರಿಶೀಲಿಸುವ ಸಲುವಾಗಿ ಎರಡು ದಿನಗಳ ಕಾಲ ತಾಲೀಮು ನಡೆಸಲಾಗಿದೆ.
ವಿಶೇಷ ಅಧಿವೇಶನದ ವೇಳೆ ಯಾವುದೇ ಸಂಸದರು, ಹೊಸ ಭವನದಲ್ಲಿ ಯಾವುದೇ ರೀತಿಯ ತೊಂದರೆ ಎದುರಿಸಬಾರದು ಎಂಬ ಕಾರಣಕ್ಕೆ ಈ ಪೂರ್ವಾಭ್ಯಾಸ ಅಥವಾ ತಾಲೀಮು ನಡೆಸಲಾಗಿದೆ. ಆಗುವ ಯಾವುದೇ ಸಮಸ್ಯೆ ಇದ್ದರೆ ಅದನ್ನು ಖಚಿತಪಡಿಸಿಕೊಳ್ಳಲು ಈ ತಾಲೀಮು ಮಾಡಲಾಗುತ್ತಿದೆ. ವಿಶೇಷವಾಗಿ ಎಲ್ಲ ಸಚಿವರು ಮತ್ತು ಸಂಸದರಿಗೆ ಆಸನ ವ್ಯವಸ್ಥೆ ಸರಿ ಇದೆಯಾ ಏನಾದರೂ ಅನಾನುಕೂಲಗಳು ಇವೆಯಾ ಎಂಬುದನ್ನು ಈ ಪೂರ್ವಾಭ್ಯಾಸದ ವೇಳೆ ಪರಿಶೀಲನೆ ನಡೆಸಲಾಗಿದೆ. ಆಸನಗಳು, ಮೈಕ್‌ಗಳು ಮತ್ತು ಸ್ಕ್ರೀನ್ಗಳು ಸೇರಿದಂತೆ ಎಲ್ಲ ತಾಂತ್ರಿಕ ವ್ಯವಸ್ಥೆಗಳ ಪ್ರಯೋಗವನ್ನು ಮಾಡಲಾಗುತ್ತಿದೆ.